ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19ರ ಮಿನಿ ಹರಾಜಿಗಾಗಿ ಮುಹೂರ್ತ ನಿಗದಿಯಾಗಿದೆ. ಅದರಂತೆ ಮುಂದಿನ ತಿಂಗಳು ಡಿಸೆಂಬರ್ 15ರಂದು ಮಿನಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಇದಾಗ್ಯೂ ಈ ಬಾರಿ ಹರಾಜು ನಡೆಯುವುದು ಎಲ್ಲಿ ಎಂಬುದನ್ನು ತಿಳಿಸಲಾಗಿಲ್ಲ.
ಕಳೆದ ಬಾರಿಯ ಮೆಗಾ ಹರಾಜನ್ನು ಸೌದಿ ಅರೇಬಿಯಾದಲ್ಲಿ ಆಯೋಜಿಸಲಾಗಿತ್ತು. 2 ದಿನಗಳ ಕಾಲ ನಡೆದಿದ್ದ ಹರಾಜಿಗೆ ರಿಯಾದ್ ನಗರದ ಪ್ರತಿಷ್ಠಿತ ಐಷಾರಾಮಿ ಹೋಟೆಲ್ ಆತಿಥ್ಯ ವಹಿಸಿತ್ತು. ಈ ಬಾರಿ ಮಿನಿ ಹರಾಜು ನಡೆಯುತ್ತಿರುವುದರಿಂದ ಕೇವಲ ಒಂದು ದಿನದಲ್ಲೇ ಆಕ್ಷನ್ ಪ್ರಕ್ರಿಯೆ ಮುಗಿಯಲಿದೆ.
ಅದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಹೀಗೆ ರಿಟೈನ್ ಆಟಗಾರರ ಪಟ್ಟಿ ಸಲ್ಲಿಸಲು ನವೆಂಬರ್ 15ರವರೆಗೆ ಗಡುವು ನೀಡಲಾಗಿದೆ. ಅದರಂತೆ ನವೆಂಬರ್ 15ರಂದು 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ಹೊರಬೀಳಲಿದೆ.
ಇದಾದ ಬಳಿಕ ಎಷ್ಟು ಸ್ಲಾಟ್ಗಳಿಗೆ ಹರಾಜು ನಡೆಸಬೇಕಾಗುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಅಂದರೆ ಐಪಿಎಲ್ ನಿಯಮದ ಪ್ರಕಾರ ಪ್ರತಿ ಫ್ರಾಂಚೈಸಿಗಳು ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಮಿನಿ ಹರಾಜಿಗೂ ಮುನ್ನ ಬಹುತೇಕ ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವುದರಿಂದ ಕಡಿಮೆ ಸ್ಲಾಟ್ಗಳಿಗೆ ಹರಾಜು ನಡೆಯಲಿದೆ.
ಉದಾಹರಣೆಗೆ, 10 ಫ್ರಾಂಚೈಸಿಗಳು ಒಟ್ಟು 200 ಆಟಗಾರರನ್ನು ತಮ್ಮ ತಂಡಗಳಲ್ಲಿ ಉಳಿಸಿಕೊಂಡರೆ, ಉಳಿದ 50 ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಅದಕ್ಕೂ ಮುನ್ನ ಹರಾಜಿಗಾಗಿ ಆಟಗಾರರ ಹೆಸರು ನೊಂದಾಣಿ ಪ್ರಕ್ರಿಯೆ ಕೂಡ ನಡೆಯಲಿದ್ದು, ಆ ಬಳಿಕ ಆ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಈ ಶಾರ್ಟ್ ಲಿಸ್ಟ್ನಲ್ಲಿ ಸ್ಥಾನ ಪಡೆದ ಆಟಗಾರರ ಹೆಸರುಗಳು ಮಾತ್ರ ಡಿಸೆಂಬರ್ 15 ರಂದು ನಡೆಯಲಿರುವ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ.
ಇದನ್ನೂ ಓದಿ : ‘ಮಹಾನಟಿ’ ವಂಶಿ ಮಿಂಚಿಂಗ್.. Zee ಕನ್ನಡ ಹೊಸ ಕೊಡುಗೆ!



















