ರಾಯಚೂರು: ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆಯಿಂದ ಒಡಹುಟ್ಟಿದ ಅಣ್ಣನೇ ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವೆಂಕಟೇಶ್ವರ್ ಕ್ಯಾಂಪ್‌ನಲ್ಲಿ ನಡೆದಿದೆ.
ರಾಜು ಅಲಿಯಾಸ್ ಎಮ್ಮಿರಾಜು (32) ಕೊಲೆಯಾದ ತಮ್ಮ. ಸುರೇಶ್ ಅಲಿಯಾಸ್ ಸೂರಿಬಾಬು(38) ಕೊಲೆಗೈದ ಅಣ್ಣ. ಪೊಲೀಸ್ ಮೂಲಗಳ ಪ್ರಕಾರ, ಹೈದ್ರಾಬಾದ್‌ನಲ್ಲಿ ಪತ್ನಿಯನ್ನು ಬಿಟ್ಟು ಊರಿಗೆ ಬಂದಿದ್ದ ರಾಜು. ಊರಲ್ಲೇ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತ ಅಣ್ಣ ಸೂರಿಬಾಬು ಗ್ರಾಮದಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ನಿನ್ನೆ ಭಾನುವಾರ ‘ಸಂಡೇ ಪಾರ್ಟಿ’ ಎಂದು ಅಣ್ಣ-ತಮ್ಮ ಇಬ್ಬರೂ ಒಟ್ಟಿಗೆ ಸೇರಿ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಅಣ್ಣನ ಪತ್ನಿ ಬಗ್ಗೆ ಮಾತಾಡಿರುವ ತಮ್ಮ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ತಮ್ಮನ ಮೇಲೆ ಅಣ್ಣ ಸೂರಿಬಾಬುಗೆ ಅನುಮಾನ ಬಂದು ಹೊಡೆದಾಟಕ್ಕೆ ಕಾರಣವಾಗಿದೆ
ಕೋಪದಲ್ಲಿ ಸೂರಿಬಾಬು ಕೊಡಲಿ ತೆಗೆದು ತಮ್ಮನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಘಟನೆ ಅಕ್ಕಪಕ್ಕದವರಿಗೆ ತಿಳಿದು ಸುದ್ದಿ ಪೊಲೀಸರಿಗೂ ಮುಟ್ಟಿದೆ. ತಕ್ಷಣ ಸ್ಥಳಕ್ಕೆ ಬಂದ ಸಿಂಧನೂರು ಗ್ರಾಮೀಣ ಠಾಣೆಯ ಪೊಲೀಸರು ಆರೋಪಿ ಸೂರಿಬಾಬು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ!



















