ದೆಹಲಿ : ಲಡ್ಡು ಪ್ರಸಾದ ತಯಾರಿಸಲು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ರಾಸಾಯನಿಕ ಬೆರೆಸಿದ ನಕಲಿ ತುಪ್ಪ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ.
ನಕಲಿ ತುಪ್ಪ ತಯಾರಿಸಲು ಉತ್ತರಾಖಂಡ ಮೂಲದ ಭೋಲೆಬಾಬಾ ಡೈರಿಗೆ ರಾಸಾಯನಿಕ ಪದಾರ್ಥಗಳನ್ನು ಪೂರೈಸುತ್ತಿದ್ದ ದೆಹಲಿ ಮೂಲದ ವ್ಯಾಪಾರಿಯನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ಬಂಧಿತನನ್ನು ಅಜಯ್ ಕುಮಾರ್ ಸುಗಂಧ ಎಂದು ಗುರುತಿಸಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತದಲ್ಲಿರುವ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಗೆ ಕಲಬೆರಕೆಯ ತುಪ್ಪ ಬಳಸಲಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ತನಿಖೆ ನಡೆಸಲಾಗುತ್ತಿದೆ. ಕಲಬೆರಕೆ ತುಪ್ಪ ಪೂರೈಸುತ್ತಿದ್ದ ಭೋಲೆಬಾಬಾ ಡೈರಿಗೆ ಅಜಯ್ ಕುಮಾರ್ ಹಲವು ರಾಸಾಯನಿಕ ಪದಾರ್ಥಗಳನ್ನು ಒದಗಿಸುತ್ತಿದ್ದ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ವಿವಾದ?
2024ರ ಸೆಪ್ಟೆಂಬರ್‌ನಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದವನ್ನು ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪದಿಂದ ತಯಾರಿಸಲಾಗಿತ್ತು ಎಂದು ಆರೋಪಿಸಿದ್ದರು. ಇದಾದ ಬಳಿಕ ವಿವಾದ ಭುಗಿಲೆದ್ದಿತು. ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಸ್‌ಐಟಿಯನ್ನು ರಚಿಸಲಾಯಿತು. ಟಿಟಿಡಿ ಬಳಸುವ ತುಪ್ಪದ ಖರೀದಿ ದಾಖಲೆಗಳು, ಪೂರೈಕೆ ಜಾಲ ಮತ್ತು ಗುಣಮಟ್ಟ-ಪರೀಕ್ಷಾ ವಿಧಾನಗಳನ್ನು ಪರಿಶೀಲಿಸಲು ಪ್ರಾರಂಭಿಸಲಾಯಿತು.
ಇದನ್ನೂ ಓದಿ : ಜೈಲಲ್ಲಿರುವ ಉಗ್ರರಿಗಿಂತ ವಿಧಾನಸೌಧದಲ್ಲಿರುವ ಉಗ್ರರೆ ಹೆಚ್ಚು ಅಪಾಯ : ಕುಮಾರಸ್ವಾಮಿ


















