ನೇಪಾಳ : ಬಿಹಾರ ವಿಧಾನಸಭಾ ಚುನಾವಣೆಗೆ ನಾಳೆ ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಭದ್ರತೆಯ ಹಿತದೃಷ್ಟಿಯಿಂದ ರಾಜ್ಯವು ನೇಪಾಳದ ಜೊತೆ ಹಂಚಿಕೊಂಡಿರುವ ಬಿರ್ಗುಂಜ್-ರಕ್ಸೌಲ್ ಗಡಿ ಸೇರಿದಂತೆ ಹಲವು ಗಡಿ ಪ್ರದೇಶಗಳನ್ನು 72 ಗಂಟೆಗಳ ಕಾಲ ಮುಚ್ಚಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮಹೋಟ್ಟರಿ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ, “ನವೆಂಬರ್ 11ರಂದು ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ಭದ್ರತಾ ಕ್ರಮವಾಗಿ ಗಡಿ ಬಂದ್ ಮಾಡಲಾಗುವುದು. ಮಹೋಟ್ಟರಿ ಜಿಲ್ಲೆಯ ಎಲ್ಲ ಗಡಿಗಳು ಬಂದ್ ಆಗಲಿವೆ. ಶನಿವಾರದಿಂದಲೇ ಈ ಗಡಿಯಲ್ಲಿ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ನವೆಂಬರ್ 11ರ ಮರುದಿನ ಗಡಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ” ಎಂದು ಮಾಹಿತಿ ನೀಡಿದ್ದಾರೆ.
ನೇಪಾಳ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಗಡಿಯಲ್ಲಿರುವ 20 ಜಿಲ್ಲೆಗಳ ಒಟ್ಟು 122 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಮತಪ್ರಚಾರ ಭಾನುವಾರ ಮುಕ್ತಾಯಗೊಂಡಿದೆ. ಎನ್ಡಿಎ ಮತ್ತು ಮಹಾಘಟಬಂಧನ್ ನಾಯಕರು ಅಂತಿಮ ಕ್ಷಣದವರೆಗೂ ಮತಯಾಚನೆ ನಡೆಸಿದ್ದರು. ಒಟ್ಟು 1,302 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3.7 ಕೋಟಿಗೂ ಹೆಚ್ಚು ಅರ್ಹ ಮತದಾರರಿದ್ದಾರೆ. 100 ವರ್ಷಕ್ಕಿಂತ ಮೇಲ್ಪಟ್ಟ 6255 ಮತದಾರರಿದ್ದಾರೆ.
ನಾಳೆ ಬೆಳಗ್ಗೆ 7ರಿಂದ ಮತದಾನ ಆರಂಭವಾಗಲಿದ್ದು, ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ಆದರೆ ರಾಜ್ಯದ ಚೈನ್‌ಪುರ, ರಾಜೌಲಿ, ಗೋವಿಂದಪುರ, ಸಿಕಂದ್ರ, ಜಮುಯಿ, ಝಾಝಾ ಮತ್ತು ಚಕೈ, ಔರಂಗಾಬಾದ್, ಗಯಾ ಮತ್ತು ಕೈಮೂರ್ ಜಿಲ್ಲೆ ಕಾನೂನು ಮತ್ತು ಸುವ್ಯವಸ್ಥೆಯ ಕಾರಣದಿಂದಾಗಿ ಒಂದು ಗಂಟೆ ಮುಂಚಿತವಾಗಿ ಸಂಜೆ 5ಕ್ಕೆ ಮತದಾನ ಅಂತ್ಯವಾಗಲಿದೆ.
ಕೇಂದ್ರ ಚುನಾವಣಾ ಆಯೋಗವು ಪಾಟ್ನಾದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿದೆ. ಮತದಾನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ ದುಷ್ಕೃತ್ಯದ ಬಗ್ಗೆ ಜನರು ಇಲ್ಲಿಗೆ ದೂರು ನೀಡಬಹುದು. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದೆ.
ಇದನ್ನೂ ಓದಿ : ಉಡುಪಿ | ವಿಕೇಂಡ್ ಹೆಸರಿನಲ್ಲಿ ಮಣಿಪಾಲದಲ್ಲಿ ದಾಂಧಲೆ.. ಎಣ್ಣೆ ಪಾರ್ಟಿ ಬಳಿಕ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಗ್ಯಾಂಗ್!



















