ಉಡುಪಿ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಇತಿಹಾಸ ಪ್ರಸಿದ್ಧ ದೇವಾಲಯಗಳು ಇರುವ ಉಡುಪಿ ಜಿಲ್ಲೆಗೆ ವಿಮಾನ ನಿಲ್ದಾಣ ಬೇಕೆಂಬ ದಶಕಗಳ ಬೇಡಿಕೆಗೆ ಇದೀಗ ರೆಕ್ಕೆ ಪುಕ್ಕ ಬಂದಿದೆ. ಈ ಸಂಬಂಧ ಜಿಲ್ಲೆಯ ಪಡುಬಿದ್ರಿಯಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಜಿಲ್ಲಾಡಳಿತ ರಾಜ್ಯ ಸರ್ಕಾರದ ಐಡಿಡಿ (ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ)ಗೆ ಇತ್ತೀಚಿಗೆ ಪ್ರಸ್ತಾವನೆ ಸಲ್ಲಿಸಿದೆ.
ಸಾಮಾನ್ಯ ನಾಗರಿಕರೂ ವಿಮಾನದಲ್ಲಿ ಪ್ರಯಾಣಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಆಶಯದಂತೆ ಜಾರಿಗೆ ಬಂದ ಉಡಾನ್ 1 (ಉಡೇ ದೇಶ್ ಕಾ ಆಮ್ ನಾಗರಿಕ್) ಬಳಿಕ ಉಡಾನ್ 2 ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣದ ಚಿಂತನೆ ನಡೆದಿದೆ.
ಪ್ರಧಾನಿ ಉಡುಪಿಗೆ ಬಂದಾಗ ಮನವಿ ಸಲ್ಲಿಕೆ!
ಇನ್ನು ಉಡುಪಿ ಶ್ರೀಕೃಷ್ಣ ಮಠದಲ್ಲಿ ನ.28ರಂದು ನಡೆಯುವ ಲಕ್ಷ ಕಂಠ ಗೀತಾಗಾಯನ, ಪಾರಾಯಣ ಹಾಗೂ ಸುವರ್ಣಮಯ ತೀರ್ಥಮಂಟಪ ಹಾಗೂ ಸುವರ್ಣ ಹೊದಿಸಿದ ಕನಕನ ಕಿಂಡಿಯ ಸಮರ್ಪಣೆಗೆ ಬರುವ ಪ್ರಧಾನಿ ಮೋದಿಗೂ ಕೂಡ ಏರ್‌ಪೋರ್ಟ್ ಬೇಡಿಕೆ ಕುರಿತು ಮನವಿ ಸಲ್ಲಿಸಲಾಗುತ್ತದೆ.
ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರಸ್ತಾಪಿತ ವಿಮಾನ ನಿಲ್ದಾಣ ಪ್ರದೇಶವಾದ ಪಡುಬಿದ್ರಿ ನಡುವೆ ಕೇವಲ 30 ಕಿ.ಮೀ ಅಂತರವಿದೆ. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಹಲವು ವರ್ಷಗಳಿಂದ ರನ್ ವೇ ವಿಸ್ತರಣೆ ಗೊಳಿಸುವ ಚರ್ಚೆ ನೆಡೆಯುತ್ತಿದ್ದು, ದುಬಾರಿ ವೆಚ್ಚ ಹಿನ್ನಲೆಯಲ್ಲಿ ಕಾರ್ಯಸಾಧ್ಯ ವಾಗಿರಲಿಲ್ಲ.ಹೀಗಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಪಡುಬಿದ್ರಿಯನ್ನು ಟ್ವಿನ್ ಏರ್‌ಪೋರ್ಟ್ ಅಥವಾ ಟರ್ಮಿನಲ್ 2 (ಮುಂಬಯಿ, ದಿಲ್ಲಿ ಮಾದರಿ) ನೆಲೆಯಲ್ಲಿ ಪರಿಗಣಿಸುವಂತೆ ಹಾಗೂ ಮಂಗಳೂರಿನಲ್ಲಿ ರನ್‌ವೇ ವಿಸ್ತರಣೆ ಅಸಾಧ್ಯವೆನ್ನುವುದನ್ನು ಮನವಿಯಲ್ಲಿ ಮನದಟ್ಟು ಮಾಡುವ ಯತ್ನ ನಡೆದಿದೆ ಎಂದು ವರದಿಯಾಗಿದೆ.
ಇಲ್ಲಿ ಮಂಗಳೂರು ರನ್‌ವೇ ವಿಸ್ತರಣೆ ಮಾಡುವ ಬದಲು ಪಡುಬಿದ್ರಿಯಲ್ಲಿ ಲಭ್ಯವಿರುವ 500 ರಿಂದ 1,000 ಎಕರೆ ಭೂಮಿಯಲ್ಲಿ ಹೊಸದೊಂದು ವಿಮಾನ ನಿಲ್ದಾಣವನ್ನು ತೀರಾ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದಾಗಿದೆ.ಹಾಗಾಗಿ ಆರ್ಥಿಕತೆಯ ವಿಚಾರದಲ್ಲೂ ಸಹಕಾರಿಯಾಗಲಿದ್ದು, ಪಡುಬಿದ್ರಿಯಲ್ಲಿ ವಿಮಾನ ನಿಲ್ದಾಣ ಮಾಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಡುಬಿದ್ರಿಯಲ್ಲಿ ಏರ್‌ಪೋರ್ಟ್ ನಿರ್ಮಾಣದಿಂದ ಉದ್ಯೋಗ ಸೃಷ್ಟಿ, ಆರ್ಥಿಕತೆ ವೃದ್ಧಿಯಾಗಲಿದೆ. ಕೈಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೂ ವಿಮಾನ ನಿಲ್ದಾಣ ಪೂರಕವಾಗಲಿದೆ. ಒಟ್ಟಿನಲ್ಲಿ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ ಸಹಾಯಕರಿಯಾಗಲಿರುವ ವಿಮಾನ ನಿಲ್ದಾಣದ ಬೇಡಿಕೆಗೆ ಆದಷ್ಟು ಬೇಗ ಹಸಿರು ನಿಶಾನೆ ಸಿಗಲಿ ಎನ್ನುವುದು ಸ್ಥಳೀಯ ಜನರ ಆಶಯವಾಗಿದೆ.
ಇದನ್ನೂ ಓದಿ : ಜೈಲಿನಲ್ಲಿ ಕೈದಿಗಳಿಗೆ ರಾಜ್ಯಾಥಿತ್ಯ | ಇಂದು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿರುವ ಜಿ.ಪರಮೇಶ್ವರ್



















