ಬೆಂಗಳೂರು: ದೇಶದಲ್ಲಿ ದಿನೇದಿನೆ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆನ್ ಲೈನ್ ವಂಚಕರ ಜಾಲಕ್ಕೆ ಸಿಲುಕಿ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವವರ ಸುದ್ದಿಯನ್ನು ನಿತ್ಯವೂ ಓದುತ್ತೇವೆ. ಇದನ್ನು ತಡೆಗಟ್ಟುವ ದಿಸೆಯಲ್ಲಿ ಫೋನ್ ಪೇ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಆ್ಯಪ್ ಈಗ ಫೋನ್ ಪೇ ಪ್ರೊಟೆಕ್ಟ್ (PhonePe Protect) ಎಂಬ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇದರಿಂದ ಗ್ರಾಹಕರು ಶಂಕಾಸ್ಪದ ಮೊಬೈಲ್ ನಂಬರ್ ಗಳಿಗೆ ಪೇಮೆಂಟ್ ಮಾಡುವುದನ್ನು ತಡೆಯುತ್ತದೆ.
ಇದರ ಕಾರ್ಯನಿರ್ವಹಣೆ ಹೇಗೆ?
ಕೇಂದ್ರ ಸರ್ಕಾರದ ಟೆಲಿಕಮ್ಯುನಿಕೇಷನ್ಸ್ ಇಲಾಖೆಯು ಶಂಕಾಸ್ಪದ ವಹಿವಾಟು, ಆನ್ ಲೈನ್ ವಂಚನೆಗೆ ಕಾರಣವಾಗುವ ಲಕ್ಷಾಂತರ ಮೊಬೈಲ್ ನಂಬರ್ ಗಳನ್ನು ಗುರುತಿಸಿದೆ. ಈ ನಂಬರ್ ಗಳಿಗೆ ಫೋನ್ ಪೇ ಬಳಕೆದಾರರು ಹಣ ಪಾವತಿಸಲು ಮುಂದಾದಾಗ ಫೋನ್ ಪೇ ಪ್ರೊಟೆಕ್ಟ್ ಫೀಚರ್ ಎಚ್ಚರಿಸುತ್ತದೆ. ಹಾಗೆಯೇ, ಅಂತಹ ಮೊಬೈಲ್ ನಂಬರ್ ಗಳಿಗೆ ಹಣ ವರ್ಗಾವಣೆ ಮಾಡುವುದನ್ನು ಬ್ಲಾಕ್ ಮಾಡುತ್ತದೆ. ಇದರಿಂದ ಆನ್ ಲೈನ್ ವಂಚನೆ ತಡೆಯಬಹುದಾಗಿದೆ.
ಅನಾಮಧೇಯ, ಶಂಕಾಸ್ಪದ ಸಂಖ್ಯೆಗಳಿಗೆ ಪಾವತಿಗಳ ಸಮಯದಲ್ಲಿ ಫೋನ್ ಪೇ ಸಿಸ್ಟಮ್ ಗುಪ್ತಚರವು ಈ ಅಪಾಯಗಳನ್ನು ಗುರುತಿಸುತ್ತದೆ. ಬಳಕೆದಾರರು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ಇದು ನೋಟಿಫಿಕೇಷನ್ ರೂಪದಲ್ಲಿ ಎಚ್ಚರಿಕೆ ನೀಡುತ್ತದೆ. ಇದರಿಂದಾಗಿ ಗ್ರಾಹಕರು ವಂಚಕರಿಗೆ ಹಣ ಕಳುಹಿಸುವುದು ತಪ್ಪುತ್ತದೆ.
ಭಾರತದಲ್ಲಿ ಆನ್ ಲೈನ್ ಮೂಲಕ ಜನ ಸುರಕ್ಷಿತವಾಗಿ ಪಾವತಿ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ಫೋನ್ ಪೇ ಪ್ರೊಟೆಕ್ಟ್ ಎಂಬ ಫೀಚರ್ ಅಳವಡಿಸಿದ್ದೇವೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸೇರಿ ಹಲವು ಅತ್ಯಾಧುನಿಕ ತಂತ್ರಜ್ಞಾನವನ್ನು ಇದಕ್ಕಾಗಿ ಬಳಸಲಾಗಿದೆ. ಇದು ದೇಶದ ಆರ್ಥಿಕತೆಗೂ ಪೂರಕ ಎಂದು ಫೋನ್ ಪೇಯ ಟ್ರಸ್ಟ್ ಸೇಫ್ಟಿ ಮುಖ್ಯಸ್ಥ ಅನುಜ್ ಬನ್ಸಾಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹೀರೋ ಎಕ್ಸ್‌ಟ್ರೀಮ್ 125R : ಡ್ಯುಯಲ್-ಚಾನೆಲ್ ABS ನೊಂದಿಗೆ ಹೊಸ ವೇರಿಯೆಂಟ್ ; ಅದರ ಸಂಪೂರ್ಣ ವಿವರ ಇಲ್ಲಿದೆ



















