ಉತ್ತರ ಪ್ರದೇಶ: ಇಂದು ಬರ್ತಡೇ ಆಚರಣೆ ಎನ್ನುವುದು ಒಂದು ಟ್ರೆಂಡ್ ಆಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ದೊಡ್ಡಮಟ್ಟದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಹಾಗೆಯೇ ತಾವು ಸಾಕಿದ ಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸುವುದು ಇತ್ತೀಚೆಗೆ ಶುರುವಾಗುತ್ತಿದ್ದು, ತಮ್ಮ ಪ್ರಾಣಿಗಳ ಮೇಲೆ ಇರುವ ಪ್ರೀತಿಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಅವುಗಳಿಗೆ ಸೀಮಂತ ಮಾಡುವುದು, ಹುಟ್ಟುಹಬ್ಬ ಮಾಡುವುದು ಟ್ರೆಂಡ್ ಆಗಿದೆ. ಅದೇ ರೀತಿ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸುನಗಢ ಗ್ರಾಮ ಇದೀಗ ಸಾಕ್ಷಿಯಾಗಿದೆ.
ಇಲ್ಲಿನ ಗ್ರಾಮಸ್ಥರು ಎಲ್ಲಾ ಒಟ್ಟು ಗೂಡಿ ತಮ್ಮೂರಿನ ಪ್ರೀತಿಯ ಶೇರಾ ಎಂಬ ಎಮ್ಮೆಯ ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಲೀಕ ಇಸ್ರಾರ್ ಮನೆಯಲ್ಲಿ ಶೇರಾ ಎನ್ನುವ ಎಮ್ಮೆ ಇದ್ದು ಅದರ ಎರಡನೇ ವರ್ಷದ ಹುಟ್ಟು ಹಬ್ಬವಾಗಿತ್ತು. ಈ ದಿನವನ್ನು ಸ್ಮರಣೀಯವಾಗಿಸಲು ಅಮ್ರೋಹಾದ ಸುಂಗರ್ ಗ್ರಾಮದ ಗ್ರಾಮ ಸ್ಥರು ಹುಟ್ಟುಹಬ್ಬವನ್ನು ಆಚರಿಸಲು ಒಟ್ಟುಗೂಡಿದರು. ಈ ಆಚರಣೆಗಾಗಿ ಮಾಲೀಕನು ಲಕ್ಷಾಂತರ ಹಣ ಅಂದರೆ 2 ಲಕ್ಷ ರೂಪಾಯಿ ಖರ್ಚು ಮಾಡಿ, ಇಡೀ ಗ್ರಾಮವನ್ನೇ ಸಂಭ್ರಮದಿಂದ ಇರುವಂತೆ ಮಾಡಿದ್ದಾರೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯು ಹುಟ್ಟುಹಬ್ಬದ ಹೀರೋ, ಶೇರಾ ಆಗಿತ್ತು . ಶೇರಾನನ್ನು ವಿವಿಧ ಬಣ್ಣದ ಹೂವಿನ ಹಾರಗಳು, ಆಕರ್ಷಕ ಬಟ್ಟೆಗಳು ಮತ್ತು ನೋಟಿನ ಹಾರಗಳಿಂದ ಶೃಂಗರಿಸಲಾಗಿತ್ತು. ಆಲಂಕಾರಗೊಂಡ ಶೇರಾನೊಂದಿಗೆ ಇಡೀ ಗ್ರಾಮಸ್ಥರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ಹುಟ್ಟುಹಬ್ಬದ ಸಂಭ್ರಮದ ಭಾಗವಾಗಿ, ಶೇರಾನ ಮುಖಕ್ಕೆ ಕೇಕ್ ರೀತಿಯ ಕ್ರೀಮ್ ಹಚ್ಚಿ ಸಿಹಿ ತಿನಿಸುಗಳನ್ನು ನೀಡಲಾಯಿತು.
ವೈರಲ್ ಆಗುತ್ತಿರುವ ವೀಡಿಯೊಗಳಲ್ಲಿ, ಗ್ರಾಮಸ್ಥರು ಡಿಜೆ ಡ್ಯಾನ್ಸ್ ಗೆ ನೃತ್ಯ ಮಾಡುತ್ತಿರುವುದು, ಶೇರಾ ಅವರೊಂದಿಗೆ ಸೆಲ್ಫಿ ಮತ್ತು ಫೋಟೋಗಳನ್ನು ತೆಗೆದುಕೊಳ್ಳುವುದು ಕಂಡು ಬರುತ್ತಿದೆ. ಮಕ್ಕಳು ಮತ್ತು ಹಿರಿಯರು ಈ ಸಂಭ್ರಮದಲ್ಲಿ ಭಾಗವಹಿಸಿ, ಹರ್ಷೋದ್ಗಾರ ಮಾಡಿ ಎಮ್ಮೆ ಯೊಂದಿಗೆ ಪೋಸ್ ನೀಡುತ್ತಿದ್ದಾರೆ. ಸ್ಥಳೀಯರ ಪ್ರಕಾರ, ಶೇರಾ ತನ್ನ ಪ್ರಭಾವಶಾಲಿ ಮೈಕಟ್ಟು ಮತ್ತು ಶಾಂತ ಸ್ವಭಾವದಿಂದ ಗ್ರಾಮದಲ್ಲಿ ಬಹಳ ಜನಪ್ರಿಯವಾಗಿದೆ. ಮಾಲೀಕ ಇಸ್ರಾರ್ ಅವರು, ಹಣದ ಮೌಲ್ಯಕ್ಕಿಂತ ತಮ್ಮ ಪ್ರಾಣಿಯ ಮೇಲಿರುವ ಪ್ರೀತಿಯೇ ಹೆಚ್ಚು ಎಂದು ಭಾವಿಸಿ, ಈ ಮೂಲಕ ಶೇರಾಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಹುಟ್ಟುಹಬ್ಬದ ಆಚರಣೆಯು ಪ್ರಾಣಿಗಳ ಮೇಲಿನ ಪ್ರೀತಿ, ಕೃತಜ್ಞತೆ ಮತ್ತು ಭಾವನಾತ್ಮಕ ಬಂಧವನ್ನು ಎತ್ತಿ ತೋರಿಸಿದ್ದು, ದೇಶಾದ್ಯಂತ ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಇಂತಹ ಪ್ರಾಣಿ ಪ್ರಿಯರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊ ಬ್ಬರು ಪ್ರಾಣಿಗಳನ್ನು ಹಿಂಸಾತ್ಮಕವಾಗಿ ನಡೆಸಿಕೊಳ್ಳುವ ಈ ಕಾಲದಲ್ಲಿ ಸಾಕು ಪ್ರಾಣಿಗಾಗಿ ಅಷ್ಟು ಹಣ ವ್ಯಯಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಬಿಗ್ ಶಾಕ್ | ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ ಕೋರ್ಟ್



















