ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಬಳಿಯ ಹೂಗ್ಲಿಯಲ್ಲಿ ಶುಕ್ರವಾರ ರಾತ್ರಿ ಅಜ್ಜಿಯ ಪಕ್ಕದಲ್ಲಿ ಮಲಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ಬಂಜಾರ ಸಮುದಾಯಕ್ಕೆ ಸೇರಿದ್ದು, ತಾರಕೇಶ್ವರದ ರೈಲ್ವೇ ಶೆಡ್‌ನಲ್ಲಿ ಸೊಳ್ಳೆ ಪರದೆಯ ಒಳಗೆ ತನ್ನ ಅಜ್ಜಿಯ ಜೊತೆ ಮಲಗಿದ್ದಳು ಎಂದು ಹೂಗ್ಲಿ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ದುಷ್ಕರ್ಮಿ ಮಗುವಿನ ಸೊಳ್ಳೆ ಪರದೆಯನ್ನು ಕತ್ತರಿಸಿ ಆಕೆಯನ್ನು ಹೊತ್ತೊಯ್ದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಎಲ್ಲೆಡೆ ಮಗುವಿಗಾಗಿ ತೀವ್ರ ಹುಡುಕಾಟ ನಡೆಸಿದ ಬಳಿಕ, ಮಧ್ಯಾಹ್ನದ ವೇಳೆಗೆ ತಾರಕೇಶ್ವರ ರೈಲ್ವೆ ಚರಂಡಿಯ ಬಳಿ ಬಾಲಕಿ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಾಳೆ. “ಅವಳು ನನ್ನೊಂದಿಗೆ ಮಲಗಿದ್ದಳು. ಮುಂಜಾನೆ 4 ಗಂಟೆ ಸುಮಾರಿಗೆ ಯಾರೋ ಆಕೆಯನ್ನು ಎಳೆದೊಯ್ದರು. ಅವರು ಯಾರೆಂದು ನನಗೆ ತಿಳಿದಿಲ್ಲ.

ಸೊಳ್ಳೆ ಪರದೆಯನ್ನು ಕತ್ತರಿಸಿ ಹೊತ್ತೊಯ್ದಿದ್ದು, ಮಾರನೇ ದಿನ ಆಕೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ” ಎಂದು ಬಾಲಕಿಯ ಅಜ್ಜಿ ಕಣ್ಣೀರು ಹಾಕುತ್ತಾ ಹರಿದ ಸೊಳ್ಳೆ ಪರದೆಯನ್ನು ತೋರಿಸಿದ್ದಾರೆ. “ನಮ್ಮ ಮನೆಗಳನ್ನು ಕೆಡವಿದ್ದರಿಂದ ನಾವು ಬೀದಿಯಲ್ಲಿ ವಾಸಿಸುತ್ತಿದ್ದೇವೆ. ನಮಗೆ ವಾಸಿಸಲು ಮನೆಯಿಲ್ಲ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
“ಗಂಟೆಗಳ ಕಾಲದ ತೀವ್ರ ಹುಡುಕಾಟದ ನಂತರ, ಬಾಲಕಿ ಚರಂಡಿಯ ಬಳಿ ರಕ್ತಸ್ರಾವದ ಸ್ಥಿತಿಯಲ್ಲಿ, ಬಟ್ಟೆಯಿಲ್ಲದೆ ಮತ್ತು ಕೆನ್ನೆಯ ಮೇಲೆ ಕಚ್ಚಿದ ಗಾಯಗಳೊಂದಿಗೆ ಪತ್ತೆಯಾಗಿದ್ದಾಳೆ. ಗಂಟೆಗಳ ಕಾಲ ಚಿಕಿತ್ಸೆ ನೀಡಿದರೂ, ಆಕೆಯ ಜನನಾಂಗದಿಂದ ಇನ್ನೂ ರಕ್ತಸ್ರಾವವಾಗುತ್ತಿದೆ” ಎಂದು ಬಿಜೆಪಿಯ ಅರಂಬಾಗ್ ಜಿಲ್ಲಾ ಕಾರ್ಯದರ್ಶಿ ಪರ್ಣಾ ಅದಕ್ ಹೇಳಿದ್ದಾರೆ.
ಪ್ರಕರಣ ಸಂಬಂಧ ಭಾನುವಾರ ಬೆಳಗ್ಗೆ ಓರ್ವನನ್ನು ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ತಾರಕೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಯ ಕುರಿತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಪೊಲೀಸರು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. “ತಾರಕೇಶ್ವರದಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಎಫ್‌ಐಆರ್ ದಾಖಲಾಗಿಲ್ಲ. ಮಮತಾ ಬ್ಯಾನರ್ಜಿ ಆಡಳಿತದ ನಿಜವಾದ ಮುಖ ಇದೇ ಆಗಿದೆ. ಮಗುವಿನ ಜೀವನವೇ ಹಾಳಾಗಿದ್ದರೂ, ಪೊಲೀಸರು ಸತ್ಯವನ್ನು ಹತ್ತಿಕ್ಕುವ ಮೂಲಕ ರಾಜ್ಯದ ನಕಲಿ ಕಾನೂನು ಮತ್ತು ಸುವ್ಯವಸ್ಥೆಯ ವರ್ಚಸ್ಸನ್ನು ರಕ್ಷಿಸುತ್ತಿದ್ದಾರೆ” ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿ | ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು



















