ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2026ರ ಆವೃತ್ತಿಗೆ ವೇದಿಕೆ ಸಿದ್ಧಗೊಳ್ಳಲಾರಂಭಿಸಿದೆ. ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆಗೊಳಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಇದೇ ನವೆಂಬರ್ 15 ರಂದು ಪ್ರಕಟಿಸಲಿವೆ ಎಂದು ಲೀಗ್‌ನ ಅಧಿಕೃತ ಪ್ರಸಾರಕರಾದ ‘ಜಿಯೋಸ್ಟಾರ್’ ದೃಢಪಡಿಸಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ನಡೆಯುವ ಈ ಪ್ರಕ್ರಿಯೆಯು, ಹಲವು ಪ್ರಮುಖ ಆಟಗಾರರ ಭವಿಷ್ಯವನ್ನು ನಿರ್ಧರಿಸಲಿದ್ದು, ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.
ನವೆಂಬರ್ 15ರ ಡೆಡ್‌ಲೈನ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಮುಕ್ತಾಯಗೊಂಡ ಕೆಲವೇ ಕ್ಷಣಗಳಲ್ಲಿ, ಪ್ರಸಾರಕರು ಈ ಬಹುನಿರೀಕ್ಷಿತ ದಿನಾಂಕವನ್ನು ಘೋಷಿಸಿದರು. ನವೆಂಬರ್ 15 ರೊಳಗೆ ಎಲ್ಲಾ ತಂಡಗಳು ತಮ್ಮ ಪಟ್ಟಿಯನ್ನು ಸಲ್ಲಿಸಬೇಕಾಗಿದ್ದು, ಆ ನಂತರ ಯಾವ ಆಟಗಾರರು ಹರಾಜಿಗೆ ಲಭ್ಯರಿರುತ್ತಾರೆ ಎಂಬ ಸ್ಪಷ್ಟ ಚಿತ್ರಣ ಲಭಿಸಲಿದೆ. ಕಳೆದ ವರ್ಷ ಮೆಗಾ ಹರಾಜು ನಡೆದಿದ್ದರಿಂದ, ಈ ಬಾರಿ ಮಿನಿ ಹರಾಜು ನಡೆಯಲಿದೆ. ಹಾಗಾಗಿ, ತಂಡಗಳು ಎಷ್ಟು ಆಟಗಾರರನ್ನು ಬೇಕಾದರೂ ಉಳಿಸಿಕೊಳ್ಳಲು ಅವಕಾಶವಿದೆ, ಯಾವುದೇ ನಿರ್ಬಂಧವಿರುವುದಿಲ್ಲ.
ಸ್ಟಾರ್ ಆಟಗಾರರ ಮೇಲೆ ಎಲ್ಲರ ಕಣ್ಣು: ಟ್ರೇಡಿಂಗ್ ವಿಂಡೋದಲ್ಲಿ ಬಿಸಿ-ಬಿಸಿ ಚರ್ಚೆ
ರೀಟೆನ್ಶನ್ ದಿನಾಂಕ ಸಮೀಪಿಸುತ್ತಿದ್ದಂತೆ, ಟ್ರೇಡಿಂಗ್ ವಿಂಡೋದಲ್ಲಿ ತೆರೆಮರೆಯ ಕಸರತ್ತುಗಳು ಜೋರಾಗಿವೆ. ಕೆಲವು ಪ್ರಮುಖ ಆಟಗಾರರು ತಂಡಗಳನ್ನು ಬದಲಾಯಿಸುವ ಸಾಧ್ಯತೆಗಳಿದ್ದು, ಈ ಕೆಳಗಿನ ಇಬ್ಬರು ಆಟಗಾರರ ಹೆಸರುಗಳು ಜೋರಾಗಿ ಕೇಳಿಬರುತ್ತಿವೆ.
ಕೆ.ಎಲ್. ರಾಹುಲ್‌ಗೆ KKR ಗಾಳ?: ಕಳೆದ ಮೆಗಾ ಹರಾಜಿನಲ್ಲಿ 14 ಕೋಟಿ ರೂಪಾಯಿಗೆ ದೆಹಲಿ ಕ್ಯಾಪಿಟಲ್ಸ್ ಪಾಲಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ನಾಯಕ ಮತ್ತು ವಿಕೆಟ್-ಕೀಪರ್-ಬ್ಯಾಟರ್ ಆಗಿ ನೇಮಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ರಾಹುಲ್ ಅವರನ್ನು ಟ್ರೇಡ್ ಮಾಡಿಕೊಳ್ಳುವ ಸಾಧ್ಯತೆಗಳ ಬಗ್ಗೆ ದೆಹಲಿ ತಂಡವು ಈಗಾಗಲೇ ಇತರ ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಗಳು ಸೂಚಿಸುತ್ತವೆ.
ರಾಜಸ್ಥಾನ್ ತೊರೆಯುತ್ತಾರಾ ಸಂಜು ಸ್ಯಾಮ್ಸನ್?: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು, ತಮ್ಮನ್ನು 2026ರ ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ನಂತರ, ಚೆನ್ನೈ ಸೂಪರ್ ಕಿಂಗ್ಸ್ (CSK) ಸೇರಿದಂತೆ ಹಲವು ಫ್ರಾಂಚೈಸಿಗಳು ಸಂಜು ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಆಸಕ್ತಿ ತೋರಿಸಿವೆ.
ತಂಡಗಳ ಲೆಕ್ಕಾಚಾರ
ಮಿನಿ ಹರಾಜಿನಲ್ಲಿ ತಂಡದ ಬಜೆಟ್ ಮತ್ತು ತಂತ್ರಗಾರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಭಾರತೀಯ ಆಲ್‌ರೌಂಡರ್‌ಗಳು ಮತ್ತು ವಿಕೆಟ್‌ಕೀಪರ್-ಬ್ಯಾಟರ್‌ಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆಯಿದ್ದು, ಫ್ರಾಂಚೈಸಿಗಳು ಇಂತಹ ಆಟಗಾರರನ್ನು ಉಳಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸುತ್ತಿವೆ. ಕಳೆದ ಬಾರಿಯ ಹರಾಜಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗಿದ್ದ ವೆಂಕಟೇಶ್ ಅಯ್ಯರ್ ಅವರಂತಹ ಕೆಲವು ಆಟಗಾರರನ್ನು ಈ ಬಾರಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ನವೆಂಬರ್ 15 ರಂದು ರೀಟೆನ್ಶನ್ ಪಟ್ಟಿ ಪ್ರಕಟವಾದ ನಂತರ, ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಮತ್ತು ಹರಾಜಿನಲ್ಲಿ ಅವರು ಯಾವ ಆಟಗಾರರನ್ನು ಗುರಿಯಾಗಿಸಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, ಐಪಿಎಲ್ 2026ರ ಹರಾಜಿನ ಪೂರ್ವದ ಈ ಪ್ರಕ್ರಿಯೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಹೊಸ ಸಂಚಲನವನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಒಲಿಂಪಿಕ್ಸ್ ಅಂಗಳಕ್ಕೆ ಕ್ರಿಕೆಟ್ ಪುನರಾಗಮನ: ಭಾರತ-ಪಾಕ್ ಪಂದ್ಯ ಬಹುತೇಕ ಅನುಮಾನ?



















