ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದ ನಂತರ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಬೋರ್ಡ್) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ. ಏಷ್ಯಾ ಕಪ್ ವಿವಾದದ ಹಿನ್ನೆಲೆಯಲ್ಲಿ, “ಕೊನೆಗೂ ಟ್ರೋಫಿಯನ್ನು ಕೈಯಲ್ಲಿ ಮುಟ್ಟಿದ ಅನುಭವವಾಯಿತು, ಬಹಳ ಖುಷಿಯಾಯಿತು,” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳುವ ಮೂಲಕ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಡೆಗೆ ತಮ್ಮ ಅಸಮಾಧಾನವನ್ನು ವ್ಯಂಗ್ಯವಾಗಿ ಹೊರಹಾಕಿದ್ದಾರೆ.
ಏಷ್ಯಾ ಕಪ್ ವಿವಾದದ ಹಿನ್ನೆಲೆ
ಕಳೆದ ತಿಂಗಳು ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಆದರೆ, ಪಿಸಿಬಿ ಮುಖ್ಯಸ್ಥ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ ನಿರಾಕರಿಸಿತ್ತು. ಈ ಘಟನೆಯ ನಂತರ, ನಖ್ವಿ ಅವರು ಟ್ರೋಫಿಯೊಂದಿಗೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಿಂದ ನಿರ್ಗಮಿಸಿದ್ದರು ಮತ್ತು ಅಂದಿನಿಂದ ಇಂದಿನವರೆಗೂ ಭಾರತ ತಂಡಕ್ಕೆ ಏಷ್ಯಾ ಕಪ್ ಟ್ರೋಫಿ ಹಸ್ತಾಂತರವಾಗಿಲ್ಲ. ಈ ವಿಷಯವಾಗಿ ಬಿಸಿಸಿಐ ಮತ್ತು ಪಿಸಿಬಿ ನಡುವೆ ಇನ್ನೂ ಸಂಘರ್ಷ ನಡೆಯುತ್ತಿದೆ. ವರದಿಗಳ ಪ್ರಕಾರ, ಬಿಸಿಸಿಐ ಈ ವಿಷಯವನ್ನು ಐಸಿಸಿಯ ಗಮನಕ್ಕೆ ತಂದಿದ್ದು, ಟ್ರೋಫಿಯನ್ನು ಕಳ್ಳತನ ಮಾಡಿರುವ ಮತ್ತು ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿರುವ ಆರೋಪದ ಮೇಲೆ ನಖ್ವಿ ವಿರುದ್ಧ ದುಬೈ ಪೊಲೀಸರಿಗೆ ದೂರು ನೀಡಲು ಕೂಡ ಚಿಂತನೆ ನಡೆಸಿತ್ತು
ಪತ್ರಿಕಾಗೋಷ್ಠಿಯಲ್ಲಿ ಸೂರ್ಯ ಹೇಳಿದ್ದೇನು?
ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನ ನಂತರ ಮಾತನಾಡಿದ ಸೂರ್ಯಕುಮಾರ್ ಯಾದವ್, “ಕೊನೆಗೂ ಟ್ರೋಫಿಯನ್ನು ಮುಟ್ಟುವಂತಾಗಿದ್ದು ಬಹಳ ಖುಷಿ ಕೊಟ್ಟಿದೆ. ಸರಣಿ ಗೆಲುವಿನ ಟ್ರೋಫಿಯನ್ನು ನನಗೆ ಹಸ್ತಾಂತರಿಸಿದಾಗ ಅದನ್ನು ಕೈಯಲ್ಲಿ ಹಿಡಿದು ಅನುಭವಿಸಿದೆ,” ಎಂದು ಹಾಸ್ಯಭರಿತವಾಗಿ ಹೇಳಿದರು.
ಇದೇ ವೇಳೆ, ಮಹಿಳಾ ವಿಶ್ವಕಪ್ ಗೆಲುವನ್ನು ಉಲ್ಲೇಖಿಸಿದ ಅವರು, “ಕೆಲವು ದಿನಗಳ ಹಿಂದೆ ಭಾರತಕ್ಕೆ ಮತ್ತೊಂದು ಟ್ರೋಫಿ ಬಂದಿದೆ. ನಮ್ಮ ಮಹಿಳಾ ತಂಡ ವಿಶ್ವಕಪ್ ಗೆದ್ದಿದೆ. ಆ ಟ್ರೋಫಿಯೂ ತವರಿಗೆ ಮರಳಿದೆ. ಬಹಳ ಸಂತೋಷವಾಗುತ್ತಿದೆ ಮತ್ತು ಈ ಟ್ರೋಫಿಯನ್ನು ಮುಟ್ಟುತ್ತಿರುವುದಕ್ಕೂ ಖುಷಿಯಾಗುತ್ತಿದೆ,” ಎಂದು ಹೇಳಿದರು.
ಮುಂದಿನ ಸವಾಲು: ದಕ್ಷಿಣ ಆಫ್ರಿಕಾ ಪ್ರವಾಸ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಕೇವಲ 4.5 ಓವರ್‌ಗಳ ಆಟ ನಡೆದಿದ್ದು, ಭಾರತ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿತ್ತು. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆಯ ದೃಷ್ಟಿಯಿಂದ ಈ ಸರಣಿಯು ಮಹತ್ವದ್ದಾಗಿತ್ತು.
ಭಾರತ ತಂಡವು ಈಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್ 9 ರಿಂದ 19ರವರೆಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಲಿದೆ.
ಇದನ್ನೂ ಓದಿ: ವಿಶ್ವಕಪ್ ಹೀರೋಯಿನ್ ರಿಚಾ ಘೋಷ್‌ಗೆ DSP ಹುದ್ದೆ ‘ಬಂಗ ಭೂಷಣ’ ಗೌರವ, ಬಹುಮಾನಗಳ ಸುರಿಮಳೆ



















