ಬೆಂಗಳೂರು : ಕಬ್ಬು ಬೆಳೆಗಾರರ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇಷ್ಟಾದರೂ ರೈತರ ಹೋರಾಟ ಮಾತ್ರ ತಣ್ಣಗಾಗುತ್ತಿಲ್ಲ. ಕಬ್ಬಿನ ಬೆಲೆಗಾಗಿ ರೈತರು ಪಟ್ಟು ಹಿಡಿದರೆ, ಇತ್ತ ಸರ್ಕಾರ ಸಭೆ ಮೇಲೆ ಸಭೆ ಮಾಡುತ್ತಿದೆ. ಅದರಲ್ಲೂ ಇಂದು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದು, ಆ ಸಭೆ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚಿಸಲು ತುರ್ತು ಅವಕಾಶ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಪ್ರತೀ ಟನ್ ಕಬ್ಬಿಗೆ 3500 ರೂ. ದರ ನಿಗದಿ ಮಾಡಬೇಕು ಅಂತಾ ಪಟ್ಟು ಹಿಡಿದಿರುವ ರೈತರ ಹೋರಾಟ ತೀವ್ರಗೊಂಡಿದೆ. ದಿನಕ್ಕೊಬ್ಬರು ಸಚಿವರು ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಹೀಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆಯುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ, ಅದರಂತೆ ಇದೀಗ ಪತ್ರ ಬರೆದಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ವಿಜಯನಗರ, ಬೀದರ್, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಗಂಭೀರ ಸಮಸ್ಯೆ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲು ತುರ್ತು ಅವಕಾಶ ಕೋರಿ ಪತ್ರ ಬರೆಯುತ್ತಿದ್ದೇನೆ.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ಸಂಧಾನಕ್ಕೆ ರಾಜ್ಯ ಸರ್ಕಾರ ನಿರಂತರ ಪ್ರಯತ್ನಿಸಿದರೂ ಹೋರಾಟ ತೀವ್ರಗೊಂಡಿದೆ. ಕಟಾವು ಮತ್ತು ಸಾರಿಗೆ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ರೈತರಿಗೆ ಸಿಗುವ ಲಾಭ ಕಡಿಮೆ. ಪ್ರತಿ ಟನ್‌ಗೆ 800 ರಿಂದ 900 ರೂ. ವರೆಗೆ ವೆಚ್ಚ ಇರುತ್ತದೆ. ರೈತನಿಗೆ ತಲುಪುವ ಹಣ ಕೇವಲ ಪ್ರತಿ ಟನ್‌ಗೆ 2,600 ರಿಂದ 3 ಸಾವಿರ ರೂ. ಮಾತ್ರ. ಹೀಗಾಗಿ ಕೇಂದ್ರ ಸರ್ಕಾರ ನೆರವಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: 8 ದಿನದ ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೊಚ್ಚಿಗೆದ್ದ ರೈತರು | ಕಾರಿಗೆ ಚಪ್ಪಲಿ ಎಸೆತ!



















