ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಆನೆ ಸೆರೆ ಕಾರ್ಯಾಚರಣೆಗೆ ಸಾಕಾನೆಗಳಾದ ಏಕಲವ್ಯ, ಧನಂಜಯ, ಪ್ರಶಾಂತ, ಹರ್ಷ ಸೇರಿ ಆರು ಆನೆಗಳನ್ನು ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ಪೋಸ್ಟ್ಗೆ ಕರೆತರಲಾಗಿದೆ. ನಾಳೆಯಿಂದ ಒಂಟಿ ಸಲಗದ ಸೆರೆ ಕಾರ್ಯಾಚರಣೆ ಪ್ರಾರಂಭವಾಗಲಿದೆ.
ಕಾಡಾನೆ ಕೆರೆಮನೆ ಗ್ರಾಮದ ಸುತ್ತಮುತ್ತ ರೈತರಿಗೆ ಹಾಗೂ ವಾಹನ ಸವಾರರಿಗೆ ಕಾಣಿಸಿಕೊಳ್ಳುತ್ತಿದ್ದು, ಸಿಕ್ಕ ಸಿಕ್ಕ ಜಮೀನು, ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಶನಿವಾರ ರೈತರಿಗೆ ಕಾಡಾನೆ ಕಾಣಿಸಿಕೊಂಡು, ಅಡಿಕೆ ತೋಟ ನಾಶಮಾಡಿತ್ತು.
ಕಾಡಾನೆ ದಾಳಿಯಿಂದ ಮೃತಪಟ್ಟ ಹರೀಶ್ ಮತ್ತು ಉಮೇಶ್ ಅವರ ಮನೆಗೆ ಶನಿವಾರ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ 5 ಲಕ್ಷ ರೂ. ಸಹಾಯ ಘೋಷಿಸಿದ್ದರು. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ತಲಾ ಒಂದು ಲಕ್ಷ ಧನಸಹಾಯ ಮಾಡಿದ್ದರು. ಇಬ್ಬರನ್ನು ಕೊಂದ ಕಾಡಾನೆಯನ್ನು ಅದಷ್ಟು ಬೇಗ ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು.
ಇದನ್ನೂ ಓದಿ : ಬಳ್ಳಾರಿ | ಕೆ-ಸೆಟ್ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಕಿವಿಯೋಲೆ, ಮೂಗುತಿ ಬಿಚ್ಚಿಸಿದ ಸಿಬ್ಬಂದಿ



















