ಮೈಸೂರು : ‘ಸವಾಲುಗಳನ್ನು ಎದುರಿಸಿ, ಸಮಾಜಕ್ಕೆ ಕೊಡುಗೆ ನೀಡಿ’ ಎಂದು ಬಾಲಿವುಡ್ ನಟ ಸೋನು ಸೂದ್ ಸಲಹೆ ನೀಡಿದರು.
ಮೈಸೂರಿನ ಮಹಾರಾಜ ಮೈದಾನದಲ್ಲಿ ಜಿತೋ ಮಹಿಳಾ ಘಟಕದಿಂದ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಮಹಿಳಾ ಉಡಾನ್ 2.0 ಸಮಾವೇಶಕ್ಕೆ ಬಾಲಿವುಡ್ ನಟ ಸೋನು ಸೂದ್, ನಟ ಡಾಲಿ ಧನಂಜಯ್ ಮತ್ತು ನಟಿ ಸಪ್ತಮಿ ಗೌಡ ಚಾಲನೆ ನೀಡಿದರು.
ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಸೋನು ಸೂದ್, ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕಾದರೆ ರಸ್ತೆಯಲ್ಲಿ ಹೇಗೆ ಸ್ಪೀಡ್ ಬ್ರೇಕರ್ ಬರುತ್ತದೋ ಹಾಗೇ ನಮಗೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಅವುಗಳನ್ನು ನಾವು ಎದುರಿಸಬೇಕು. ಆಗ ಮಾತ್ರ ಸಮಾಜಕ್ಕೆ ನಾವು ಏನಾದರೂ ಕೊಡುಗೆ ನೀಡಬಹುದು ಎಂದರು.
ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದಾಗ, ಅವಮಾನ, ನಿಂದನೆಗಳು, ಮಾನಸಿಕವಾಗಿ ಕುಗ್ಗಿಸುವ ಮಾತುಗಳು ಸಹಜವಾಗಿ ಕೇಳಿಬರುತ್ತವೆ. ಆದರೆ, ಅದಕ್ಕೆಲ್ಲ ಕುಗ್ಗದೇ ಹೋರಾಟ ಮಾಡಿ ಗೆಲುವಿನ ದಾರಿ ಮುಟ್ಟಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿತೋ ಮೈಸೂರು ಮಹಿಳಾ ವಿಭಾಗದ ಅಧ್ಯಕ್ಷೆ ಮೋನಾ ಭತೇವರ್, ಕಾರ್ಯದರ್ಶಿ ರಜನಿ ದಗಲಿಯಾ, ಜಿತೋ ಕೆಕೆಜಿ ವಲಯದ ಅಧ್ಯಕ್ಷ ಪ್ರವೀಣ್ ಬಫ್ನ, ಕಾರ್ಯದರ್ಶಿ ದಿಲೀಪ್ ಜೈನ್, ಸಂಚಾಲಕರಾದ ಪಿಂಕಿ ಜೈನ್, ಜಿತೋ ಮೈಸೂರು ಘಟಕದ ಅಧ್ಯಕ್ಷ ವಿನೋದ್ ಬಲ್ಕಿವಾಲ್, ಕಾರ್ಯದರ್ಶಿ ಗೌತಮ್ ಸಲೇಚಾ, ಜಿತೋ ಮೈಸೂರು ಯುವ ವಿಭಾಗದ ಕಾರ್ಯದರ್ಶಿ ಸಿದ್ಧಾರ್ಥ್ ಕಟಾರಿಯಾ, ಕಾರ್ಯದರ್ಶಿ ಪುನೀತ್ ಜುಗರಾಜ್ ಇತರರು ಇದ್ದರು.
ಇದನ್ನೂ ಓದಿ : ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಮಗು ಸಾವು



















