ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್ 2025ರ ಫೈನಲ್ ಪಂದ್ಯವು ಅಭೂತಪೂರ್ವ ಬಹುಮಾನದ ಮೊತ್ತದೊಂದಿಗೆ ಇತಿಹಾಸ ಬರೆಯುತ್ತಿದೆ. ಲಿಂಗ ಸಮಾನತೆಗಾಗಿ ಐಸಿಸಿ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರದ ಭಾಗವಾಗಿ, ಈ ಬಾರಿಯ ವಿಶ್ವಕಪ್ ವಿಜೇತ ತಂಡಕ್ಕೆ 37.3 ಕೋಟಿ ರೂಪಾಯಿ ಮತ್ತು ರನ್ನರ್ಸ್-ಅಪ್ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ ಲಭಿಸಲಿದೆ. ಇದು ಮಹಿಳಾ ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ.
ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 339 ರನ್‌ಗಳ ದಾಖಲೆಯ ಚೇಸ್ ಮಾಡಿ ಐತಿಹಾಸಿಕ ಜಯ ಸಾಧಿಸಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ, ಈಗಾಗಲೇ ಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ 20 ಕೋಟಿ ರೂಪಾಯಿ ಬಹುಮಾನವನ್ನು ಖಚಿತಪಡಿಸಿಕೊಂಡಿದೆ. ಒಂದು ವೇಳೆ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಎತ್ತಿಹಿಡಿದರೆ, ಈ ಮೊತ್ತವು ದ್ವಿಗುಣಗೊಂಡು 37.3 ಕೋಟಿ ರೂಪಾಯಿಗೆ ಏರಲಿದೆ.
ಸಮಾನ ವೇತನದ ಐತಿಹಾಸಿಕ ಹೆಜ್ಜೆ
2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಕ್ರೀಡೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಈ ಬಾರಿಯ ಒಟ್ಟು ಬಹುಮಾನದ ಮೊತ್ತ 116 ಕೋಟಿ ರೂಪಾಯಿ ಆಗಿದ್ದು, ಇದು 2022ರ ಟೂರ್ನಿಗಿಂತ (29 ಕೋಟಿ ರೂ.) ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ವಿಶೇಷವೆಂದರೆ, ಈ ಬಾರಿಯ ಬಹುಮಾನದ ಮೊತ್ತವು 2023ರ ಪುರುಷರ ವಿಶ್ವಕಪ್‌ನ ಒಟ್ಟು ಬಹುಮಾನ ಮೊತ್ತಕ್ಕಿಂತಲೂ (84 ಕೋಟಿ ರೂ.) ಹೆಚ್ಚಾಗಿದೆ.
2022ಕ್ಕೆ ಹೋಲಿಕೆ: 2022ರಲ್ಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡವು ಸುಮಾರು 11 ಕೋಟಿ ರೂ. ಬಹುಮಾನ ಪಡೆದಿತ್ತು. ಈ ಬಾರಿ ವಿಜೇತರಿಗೆ ಸಿಗುವ ಮೊತ್ತದಲ್ಲಿ 239% ಹೆಚ್ಚಳವಾಗಿದೆ. ರನ್ನರ್ಸ್-ಅಪ್ ಬಹುಮಾನದಲ್ಲೂ 273% ಏರಿಕೆಯಾಗಿದೆ.
ಸೆಮಿಫೈನಲಿಸ್ಟ್‌ಗಳಿಗೂ ಬಂಪರ್: ಈ ಬಾರಿ ಸೆಮಿಫೈನಲ್‌ನಲ್ಲಿ ಸೋತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ತಲಾ 9.3 ಕೋಟಿ ರೂಪಾಯಿ ಬಹುಮಾನ ಪಡೆಯಲಿವೆ. ಕಳೆದ ಆವೃತ್ತಿಯಲ್ಲಿ ಈ ಮೊತ್ತ ಕೇವಲ 2.5 ಕೋಟಿ ರೂಪಾಯಿ ಇತ್ತು.
ಬಹುಮಾನದ ಮೊತ್ತದ ಸಂಪೂರ್ಣ ವಿಂಗಡಣೆ
ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸಿದ ಪ್ರತಿಯೊಂದು ತಂಡಕ್ಕೂ 2 ಕೋಟಿ ರೂಪಾಯಿ ಭಾಗವಹಿಸುವಿಕೆಯ ಶುಲ್ಕವಾಗಿ ಖಾತರಿಪಡಿಸಲಾಗಿದೆ.
- 5 ಮತ್ತು 6ನೇ ಸ್ಥಾನ ಪಡೆದ ತಂಡಗಳಿಗೆ ತಲಾ 5.8 ಕೋಟಿ ರೂ.
- 7 ಮತ್ತು 8ನೇ ಸ್ಥಾನ ಪಡೆದ ತಂಡಗಳಿಗೆ ತಲಾ 2.3 ಕೋಟಿ ರೂ.
- ಲೀಗ್ ಹಂತದಲ್ಲಿ ಪ್ರತಿ ಪಂದ್ಯವನ್ನು ಗೆದ್ದಾಗ ತಂಡದ ಒಟ್ಟು ಗಳಿಕೆಗೆ ಹೆಚ್ಚುವರಿಯಾಗಿ 28 ಲಕ್ಷ ರೂಪಾಯಿ ಸೇರಲಿದೆ.
ಈ ಬಗ್ಗೆ ಮಾತನಾಡಿದ ಐಸಿಸಿ ಅಧ್ಯಕ್ಷ ಜಯ್ ಶಾ, “ಬಹುಮಾನದ ಮೊತ್ತದಲ್ಲಿನ ಈ ನಾಲ್ಕು ಪಟ್ಟು ಹೆಚ್ಚಳವು ಮಹಿಳಾ ಕ್ರಿಕೆಟ್‌ನಲ್ಲಿ ಒಂದು ಐತಿಹಾಸಿಕ ಕ್ಷಣ. ಮಹಿಳಾ ಕ್ರಿಕೆಟಿಗರು ಈ ಕ್ರೀಡೆಯನ್ನು ವೃತ್ತಿಪರವಾಗಿ ಆಯ್ಕೆಮಾಡಿಕೊಂಡರೆ ಪುರುಷರಿಗೆ ಸರಿಸಮನಾಗಿ ಪರಿಗಣಿಸಲಾಗುವುದು ಎಂಬುದು ನಮ್ಮ ಸ್ಪಷ್ಟ ಸಂದೇಶ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಿಳಾ ವಿಶ್ವಕಪ್ ಫೈನಲ್‌ಗೆ ಸಂಗೀತದ ರಂಗು : ಮಧ್ಯಂತರದಲ್ಲಿ ವೇದಿಕೆ ಏರಲಿರುವ ಸುನಿಧಿ ಚೌಹಾಣ್



















