ಬೆಂಗಳೂರು: ರಾಜ್ಯದ ಜನರ ಪಾಲಿಗೆ ಸರ್ಕಾರ ಬದುಕಿಲ್ಲ. ಅವರವರ ರಾಜಕೀಯ ಮೇಲಾಟಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ‘ಕಿಲ್ಲರ್ ಕಾಂಗ್ರೆಸ್ ಸರ್ಕಾರ’ ಎಂಬ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ನಿರಂತರವಾದ ಅಪರಾಧ ಪ್ರಕರಣಗಳನ್ನು ನಿಗ್ರಹಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 1,800ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳಾಗಿವೆ. ಬಲೂನ್ ಮಾರಾಟಕ್ಕೆ ಬಂದಿದ್ದ ಬಾಲಕಿಯ ಮೇಲೆ ಮುಖ್ಯಮಂತ್ರಿಗಳ ಜಿಲ್ಲೆಯಲ್ಲಿಯೇ ಅತ್ಯಾಚಾರ ಮತ್ತು ಹತ್ಯೆಯಾಯಿತು. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾಯಿತು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಲಾಯಿತು. ಮೂಡುಬಿದಿರೆಯ ಉಪನ್ಯಾಸಕ ತನ್ನ ವಿದ್ಯಾರ್ಥಿನಿಯನ್ನು ಬೆಂಗಳೂರಿಗೆ ಕರೆತಂದು ಅತ್ಯಾಚಾರ ಎಸಗುತ್ತಾನೆ. ರಾಜ್ಯದಲ್ಲಿ ಜನರ ಪಾಲಿಗೆ ಸರ್ಕಾರ ಸತ್ತಿರುವುದರಿಂದ ಈ ರೀತಿಯ ಧೈರ್ಯ ಅಪರಾಧಿಗಳಿಗೆ ಬಂದಿದೆ. ಯಾರು ಸಿಎಂ ಆಗಬೇಕು, ಯಾರು ಡಿಸಿಎಂ ಆಗಬೇಕು, ಯಾರ ಮಂತ್ರಿಗಿರಿಯನ್ನು ಉಳಿಸಿಕೊಳ್ಳಬೇಕು, ಯಾರು ಮಂತ್ರಿಗಿರಿಯನ್ನು ಗಳಿಸಿಕೊಳ್ಳಬೇಕು ಎನ್ನುವುದರಲ್ಲಿಯೇ ರಾಜ್ಯ ಸರ್ಕಾರ ನಿರತವಾಗಿದೆ ಎಂದು ಹರಿಹಾಯ್ದಿದ್ದಾರೆ.
ಕಳೆದ ಎರಡೂವರೆ ವರ್ಷದಲ್ಲಿ ಸುಮಾರು 20ಕ್ಕೂ ಅಧಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾತಿ ಸಮೀಕ್ಷೆಯ ಒತ್ತಡ ತಾಳಲಾರದೇ ಕೆಲವರು ಬಿದ್ದು, ಇನ್ನೂ ಕೆಲವರು ಹೃದಯಾಘಾತದಿಂದ 6ಕ್ಕೂ ಅಧಿಕ ಮಂದಿ ಅಸುನೀಗಿದರು. 15ಕ್ಕೂ ಅಧಿಕ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಗುತ್ತಿಗೆದಾರರು ದಯಾಮರಣ ಕೋರಿ ಪತ್ರ ಬರದಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿಯೇ ನಿಮ್ಮ ಸಾಧನೆ ಎಂದು ಮಾತನಾಡುತ್ತಿದ್ದೀರಿ, ನಮ್ಮ ಪ್ರಾಣಗಳಿಗೆ ಗ್ಯಾರಂಟಿ ಯಾರು? ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಹಿಡಿತವಿಲ್ಲದ ದುರ್ಬಲ ಗೃಹ ಸಚಿವರನ್ನಿಟ್ಟುಕೊಂಡು ರಾಜ್ಯ ನಡೆಸಲು ಹೇಗೆ ಸಾಧ್ಯ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸ್ಕೂಟರ್‌ನಲ್ಲಿ ಹೊರಟವರು ಸಹ ವಾಪಸ್ ಬರುತ್ತಾರೆಂಬ ಗ್ಯಾರಂಟಿಯಿಲ್ಲ. ರಸ್ತೆ ಗುಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ. ಇಲ್ಲವಾದರೆ ಯಾರೋ ಹತ್ಯೆ ಮಾಡುತ್ತಿದ್ದಾರೆ. ಅತೀ ಹೆಚ್ಚು ಮಾದಕ ಪದಾರ್ಥಗಳನ್ನ ಬಳಸುವ ರಾಜಧಾನಿಯಾಗಿ ಬೆಂಗಳೂರು ಬದಲಾಗುತ್ತಿದೆ. ಯಾರನ್ನೋ ಧರ್ಮದ ಆಧಾರದಲ್ಲಿ, ಯಾರನ್ನೋ ಜಾತಿಯ ಆಧಾರದಲ್ಲಿ ರಕ್ಷಿಸುವ ಮೂಲಕ ಪೊಲೀಸ್ ಇಲಾಖೆಯ ಹೆಸರನ್ನ ಸಹ ಕೆಡಿಸಿದ್ದೀರಿ. ನಿಮ್ಮ ಗ್ಯಾರಂಟಿಗಳನ್ನು ನಂಬಿ ರಾಜ್ಯದ ಜನ ನಿಮಗೆ ಬಹುಮತ ನೀಡಿದ್ದಾರೆ. ನೀವು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುತ್ತೀರೋ, ಬೇರೆಯವರಿಗೆ ಸ್ಥಾನ ಬಿಟ್ಟುಕೊಡುತ್ತೀರೋ, ಮಂತ್ರಿಮಂಡಲ ಬದಲಾವಣೆಯಾಗುತ್ತದೆಯೋ, ಇಲ್ಲವೋ ಅದು ನಿಮಗೆ ಬಿಟ್ಟ ವಿಚಾರ. ಆದರೆ ರಾಜ್ಯದ ಜನತೆಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ಅವರ ಮೂಗಿನ ನೇರಕ್ಕೆ ಸರ್ಕಾರ ನಡೆಯುತ್ತಿದೆ. ತೆಲಂಗಾಣ ಚುನಾವಣೆಗಾಗಿ ರಾಜ್ಯದ ನಿಗಮಗಳಲ್ಲಿ ಭ್ರಷ್ಟಾಚಾರ ಮಾಡಿದರು. ಈಗ ಬಿಹಾರದ ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ಧರಾಮಯ್ಯ ಎಷ್ಟು ಹಣ ಕೊಡುತ್ತಾರೆ. ಡಿ.ಕೆ.ಶಿವಕುಮಾರ್ ಎಷ್ಟು ಹಣ ಕೊಡುತ್ತಾರೆ ಎಂದು ಪ್ರತಿಸ್ಪರ್ಧೆಯಿದೆ. ಇದಕ್ಕಾಗಿ ರಾಜ್ಯದ ಜನತೆ ನಾಶವಾಗುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ, ಶ್ರೀಮತಿ ಹೇಮಲತಾ ನಾಯಕ್ ಸೇರಿದಂತೆ ಬಿಜೆಪಿಯ ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜಯಂತಿ | ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಮಾದರಿಯ ಪರೇಡ್



















