ನವದೆಹಲಿ : ಇಂದು ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆ . ಅದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ನರ್ಮದಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಇಂದು ಗುಜರಾತಿನ ಏಕ್ತಾ ನಗರದಲ್ಲಿ ನಿರ್ಮಿಸಲಾಗಿರುವ ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಮಾದರಿಯ ಪರೇಡ್ ನಡೆದಿದ್ದು, ‘ರಾಷ್ಟ್ರೀಯ ಏಕತಾ ದಿವಸ್’ ಎಂಬ ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವದ ಮೆರವಣಿಗೆಯ ಮಾದರಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರ ಪೊಲೀಸ್ ಪಡೆಗಳ ತುಕಡಿಗಳು ಭಾಗವಹಿಸಿವೆ.
ಹತ್ತು ರಾಜ್ಯಗಳ ಟ್ಯಾಬ್ಲೋಗಳು, ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಫ್ಲೈ-ಪಾಸ್ಟ್ ಮತ್ತು ಮಹಿಳಾ ನೇತೃತ್ವದ ತುಕಡಿಗಳು ಪ್ರಮುಖ ಪಾತ್ರ ವಹಿಸಿವೆ.ನವೆಂಬರ್ 1 ರಿಂದ 15 ರವರೆಗೆ ಭಾರತ್ ಪರ್ವ್ ಮತ್ತು ಭಾರತದ ಉಕ್ಕಿನ ಮನುಷ್ಯನನ್ನು ಗೌರವಿಸಲು ಪಾದಯಾತ್ರೆಗಳೊಂದಿಗೆ ಉತ್ಷವಗಳು ಮುಂದುವರೆಯಲಿವೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ 2010ರಲ್ಲಿ ಹೇಳಿದ್ದ ವಿಡಿಯೋವೊಂದರ ತುಣಕನ್ನು ಹಂಚಿಕೊಳ್ಳಲಾಗಿದೆ.
ಅ. 2010ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ದೇಶವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ಒಂದು ದೃಷ್ಟಿಕೋನವನ್ನು ಹಂಚಿಕೊಂಡಿದ್ದರು. ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಗೌರವಿಸಲು ಬಯಸಿದ್ದರು.
ನರೇಂದ್ರ ಮೋದಿಯವರ ಕಲ್ಪನೆಯು ಕೇವಲ ಪ್ರತಿಮೆಯ ಗಾತ್ರದ ಬಗ್ಗೆಯಾಗಿರಲಿಲ್ಲ. ಇದು ಭಾರತದ ಏಕತೆ, ಅದರ ಜನರ ಶಕ್ತಿ ಮತ್ತು ಸವಾಲಿನ ಸಮಯದಲ್ಲಿ ದೇಶವನ್ನು ಒಗ್ಗೂಡಿಸಲು ಸಹಾಯ ಮಾಡಿದ ನಾಯಕನ ಪರಂಪರೆಯನ್ನು ಆಚರಿಸುವ ಉದ್ದೇಶವನ್ನು ಹೊಂದಿತ್ತು.
ಸರ್ದಾರ್ ಪಟೇಲ್ ಅವರ ಪ್ರತಿಮೆಯು ಭಾರತದ ಅಸ್ತಿತ್ವವನ್ನು ಪ್ರಶ್ನಿಸುವವರಿಗೆ ಈ ರಾಷ್ಟ್ರವು ಶಾಶ್ವತವಾಗಿತ್ತು, ಇದೆ ಮತ್ತು ಶಾಶ್ವತವಾಗಿರುತ್ತದೆ ಎಂಬುದನ್ನು ನೆನಪಿಸುತ್ತದೆ ಎಂದು ಸಿಎಂ ಮೋದಿ ಹೇಳಿದ್ದರು.
ಅವರಿಗೆ, ಏಕತಾ ಪ್ರತಿಮೆ ಕೇವಲ ಒಂದು ಸ್ಮಾರಕಕ್ಕಿಂತ ಹೆಚ್ಚಿನದಾಗಿತ್ತು. ಇದು ಭಾರತದ ಏಕತೆಯ ಜೀವಂತ ಸಂಕೇತವಾಗಿ ಮತ್ತು ರಾಷ್ಟ್ರೀಯ ಚಳವಳಿಗೆ ಸ್ಫೂರ್ತಿ ನೀಡಿದ ದೃಷ್ಟಿಕೋನವಾಗಿ ನಿಂತಿದೆ.
ಇದನ್ನೂ ಓದಿ: ಭಾರತ-ಅಮೆರಿಕ ನಡುವೆ 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಸಹಿ: ‘ಮೇಕ್ ಇನ್ ಇಂಡಿಯಾ’ಗೆ ಮತ್ತಷ್ಟು ಬಲ



















