ಬೆಳಗಾವಿ: ಸಾರಾಯಿ ನಿಷೇಧಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ನೂರಾರು ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದರು. ಸಾರಾಯಿ ಕುಡಿತದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬೀಳುತ್ತಿವೆ. ದಯವಿಟ್ಟು ನಮ್ಮ ಕುಟುಂಬಗಳನ್ನು ಬದುಕಿಸಿ ಎಂದು ಹೇಳಿ ಪ್ರತಿಭಟಿಸುತ್ತಿದ್ದಾರೆ.
ಮದ್ಯ ನಿಷೇಧ ಆಂದೋಲನ ಜಿಲ್ಲಾ ಸಂಘಟನೆ ಹಾಗೂ ವಿವಿಧ ಮಹಿಳಾ ಸಂಘಟನೆಗಳ ವತಿಯಿಂದ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಐದುನೂರಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು.
ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆ ಒಂದೆಡೆ ಆದರೆ, ಮತ್ತೊಂದೆಡೆ ಅದಕ್ಕಿಂತಲೂ ಹೆಚ್ಚಾಗಿ ಅಕ್ರಮವಾಗಿ ಮನೆಗಳಲ್ಲಿ, ಪಾನ್ ಶಾಪ್, ಕಿರಾಣಿ ಅಂಗಡಿ, ಕೂಲ್ ಡ್ರಿಂಕ್ಸ್ ಮಳಿಗೆ ಹಾಗೂ ಗೂಡಂಗಡಿಗಳಲ್ಲಿ ಯಾವುದೇ ಭಯವಿಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಕುಡಿತದ ಚಟದಿಂದ ಅದೆಷ್ಟೋ ಮನೆಗಳಲ್ಲಿ ಗಂಡಸರೇ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಮಹಿಳೆಯರು ವಿಧವೆಯರಾಗಿ ಜೀವಿಸುವಂತಾಗಿದೆ. ಸಣ್ಣ ಮಕ್ಕಳು, ಯುವಕರು ಕೂಡ ಸಾರಾಯಿ ಕುಡಿದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬಗಳು ಹಾಳಾಗಿ, ಬಡವರ ಮನೆ ಮಕ್ಕಳ ಹೆಣದ ಮೇಲೆ ನೀವು ಸರ್ಕಾರ ನಡೆಸುವುದು ಸರಿಯಲ್ಲ. ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿಕೊಂಡು ನ. 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೋರಾಟಗಾರ್ತಿ ಅನಿತಾ ಬೆಳಗಾವಕರ್ ಎಚ್ಚರಿಕೆ ನೀಡಿದ್ದಾರೆ.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಹಿಳೆಯರು ಕೂಡಲೇ ಸಾರಾಯಿ ನಿಷೇಧಿಸಿ ಮತ್ತು ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಇರುವಂತೆ ಮಹಿಳಾ ಗ್ರಾಮ ಸಭೆಯ ಠರಾವಿಗೆ ಕಾನೂನಿನ ಪ್ರಕಾರ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ : ಭಾರತ-ಅಮೆರಿಕ ನಡುವೆ 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಸಹಿ: ‘ಮೇಕ್ ಇನ್ ಇಂಡಿಯಾ’ಗೆ ಮತ್ತಷ್ಟು ಬಲ



















