ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಎದುರಿಸುವುದು ಒಂದು ಅವಿಸ್ಮರಣೀಯ ಹಾಗೂ ವಿಶೇಷ ಘಟ್ಟವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಎದುರಿಸುವುದು ಅನೇಕ ಅನುಭವಗಳನ್ನು ನೀಡುತ್ತದೆ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಅವರು ತಿಳಿಸಿದ್ದಾರೆ.
ರಾಜ್ಯದ ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷೆಗಳಲ್ಲಿ ದೊಡ್ಡ ಬದಲಾವಣೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, 2025-26ನೇ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತೀರ್ಣ ಅಂಕವನ್ನು ಶೇ. 35 ರಿಂದ ಶೇ. 33 ಕ್ಕೆ ಇಳಿಕೆ ಮಾಡುವುದಾಗಿ ಇತ್ತಿಚಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದರು ಈ ಕುರಿತು ಇಂದು ಮಧು ಬಣಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ:
ಇತ್ತೀಚೆಗೆ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಲ್ಲಿ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡರೆ ಅವರನ್ನು ಉತ್ತೀರ್ಣ ಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದೀರಿ ಇದು ಬಹಳ ಖೇದಕರ ಸಂಗತಿ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಉತ್ತೀರ್ಣ ಹೊಂದಲು ಈ ಹಿಂದಿನಿಂದ ನಿಗದಿ ಪಡಿಸಿರುವಂತೆ ಶೇಕಡಾ 35 ಅಂಕೆಗಳು ಸಮಂಜಸವಾಗಿದ್ದು, ದೀರ್ಘಕಾಲದಿಂದ ಸಾಭೀತಾದ ಮಾನದಂಡವನ್ನು ಎಕಾಏಕಿ 33 ಅಂಕಗಳಿಗೆ ಕಡಿತಗೊಳಿಸುವಂತಹ ನಿರ್ಧಾರವು ಯಾವ ಕೋನದಿಂದಲೂ ಸಹ ಸಮಂಜಸವಾದುದಲ್ಲ.ಈ ರೀತಿ ನಿರ್ಧಾರಗಳು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವಕ್ಕೆ ಪೆಟ್ಟು ಬೀಳುವುದಲ್ಲದೇ ಮಾನಸಿಕವಾಗಿ ಧೃಡತೆಯ ಕೊರತೆಯುಂಟಾಗುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡರೆ ಉತ್ತೀರ್ಣ ಮಾಡುತ್ತೇವೆ ಎಂಬುದನ್ನು ಕೈಬಿಟ್ಟು, ಮುಂಚೆ ಇದ್ದ ಪದ್ಧತಿಯನ್ನೇ ಮುಂದುವರೆಸಬೇಕೆಂದು ಈ ಪತ್ರದ ಮೂಲಕ ಕೋರುತ್ತೇನೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಿಂದ ಒಂದೇ ಒಂದು ಕೈಗಾರಿಕೆಯೂ ಹೊರ ಹೋಗಿಲ್ಲ : ಎಂ ಬಿ ಪಾಟೀಲ್



















