ನವದೆಹಲಿ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನದ ಬಳಿಕ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ದಾಳಿ, ಹಲ್ಲೆಗಳು ನಡೆದ ಬೆನ್ನಲ್ಲೇ ಇದೀಗ ದೇಶಾದ್ಯಂತ ಹಲವಾರು ಇಸ್ಲಾಮಿಸ್ಟ್‌ಗಳು ಬೀದಿಗಿಳಿದಿದ್ದಾರೆ. ಇಸ್ಕಾನ್ (ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘವನ್ನು) ಅನ್ನು “ಯಹೂದಿ ಮಾದರಿಯ ಉಗ್ರಗಾಮಿ ಸಂಘಟನೆ” ಎಂದು ಕರೆದಿರುವ ಅವರು, ತಕ್ಷಣವೇ ಇಸ್ಕಾನ್‌ಗೆ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ. ಢಾಕಾ ಮತ್ತು ಚಟ್ಟೋಗ್ರಾಮ್ ನಗರಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಈ ಬೃಹತ್ ಪ್ರತಿಭಟನೆಗಳು, ದೇಶದಲ್ಲಿ ಹೆಚ್ಚುತ್ತಿರುವ ಹಿಂದೂ-ವಿರೋಧಿ ಭಾವನೆ ಮತ್ತು ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಮೂಲಭೂತವಾದಿ ಗುಂಪುಗಳ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸುತ್ತಿವೆ.
ಬೀದಿಗಿಳಿದು ಪ್ರತಿಭಟನೆ
ಶುಕ್ರವಾರದ ಪ್ರಾರ್ಥನೆಯ ನಂತರ, ಹೆಫಾಜತ್-ಎ-ಇಸ್ಲಾಂ ಮತ್ತು ಇಂತಿಫಾದಾ ಬಾಂಗ್ಲಾದೇಶ್‌ನಂತಹ ಕೆಲವು ಸಂಘಟನೆಗಳ ಸದಸ್ಯರು ಢಾಕಾದ ಬೈತುಲ್ ಮುಕರ್ರಂ ರಾಷ್ಟ್ರೀಯ ಮಸೀದಿಯ ಹೊರಗೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇಸ್ಕಾನ್ ಅನ್ನು “ಉಗ್ರ ಹಿಂದುತ್ವವಾದಿ ಸಂಘಟನೆ” ಎಂದು ಕರೆದ ಪ್ರತಿಭಟನಾಕಾರರು, ಅದರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಲ್-ಖೈದಾ ಜೊತೆ ನಂಟು ಹೊಂದಿರುವ ಅನ್ಸಾರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಮುಖ್ಯಸ್ಥ ಜಾಸಿಮುದ್ದೀನ್ ರಹಮಾನಿ, “ಇಸ್ಕಾನ್ ಒಂದು ಹಿಂದೂ ಸಂಘಟನೆಯಲ್ಲ. ಇದು ಯಹೂದಿಗಳು ಸೃಷ್ಟಿಸಿದ ಉಗ್ರಗಾಮಿ ಸಂಘಟನೆ. ಅವರು ಒಂದರ ಹಿಂದೆ ಒಂದರಂತೆ ಅಪರಾಧಗಳನ್ನು ಮಾಡುತ್ತಿದ್ದಾರೆ. ಇಸ್ಕಾನ್ ಅನ್ನು ನಿಷೇಧಿಸುವುದು ಇಂದಿನ ಅಗತ್ಯವಾಗಿದೆ,” ಎಂದು ಹೇಳಿದ್ದಾನೆ.
ಚಟ್ಟೋಗ್ರಾಮ್‌ನಲ್ಲಿ ನಡೆದ ಮತ್ತೊಂದು ಪ್ರತಿಭಟನೆಯಲ್ಲಿ, ಹೆಫಾಜತ್-ಎ-ಇಸ್ಲಾಂ ಸಂಘಟನೆಯು, “ಇಸ್ಕಾನ್ ಭಾರತದ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮುಸ್ಲಿಮರ ವಿರುದ್ಧ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದೆ. ಈ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸುವುದೊಂದೇ ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡುವ ಏಕೈಕ ಮಾರ್ಗ,” ಎಂದು ಘೋಷಿಸಿದೆ.
ಯೂನುಸ್ ಸರ್ಕಾರದ ಪಾತ್ರ
ಶೇಖ್ ಹಸೀನಾ ಸರ್ಕಾರದ ಪತನದ ನಂತರ, ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಇಂತಹ ಘಟನೆಗಳು ಹೆಚ್ಚಾಗಿವೆ. ಸ್ವತಃ ಯೂನುಸ್ ಸರ್ಕಾರವೇ ಇಸ್ಕಾನ್ ನಿಷೇಧ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ, ಹೈಕೋರ್ಟ್‌ನಲ್ಲಿ ಇಸ್ಕಾನ್ ಅನ್ನು “ಧಾರ್ಮಿಕ ಮೂಲಭೂತವಾದಿ ಸಂಘಟನೆ” ಎಂದು ಬಣ್ಣಿಸಿತ್ತು. ಇದೇ ಸಮಯದಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಮತ್ತು ಇಸ್ಕಾನ್ ಕೇಂದ್ರಗಳ ಮೇಲೆ ದಾಳಿಗಳು ಹೆಚ್ಚಾಗಿದ್ದು, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಮಾಜಿ ಇಸ್ಕಾನ್ ಸದಸ್ಯ ಕೃಷ್ಣ ದಾಸ್ ಪ್ರಭು ಅವರನ್ನು ಬಂಧಿಸಲಾಗಿತ್ತು.
ಇಸ್ಕಾನ್‌ನ ಸೇವಾ ಕಾರ್ಯಗಳು
ಆದರೆ, ಇಸ್ಲಾಮಿಸ್ಟ್‌ಗಳ ಆರೋಪಗಳಿಗೆ ವಿರುದ್ಧವಾಗಿ, ಇಸ್ಕಾನ್ 1970ರ ದಶಕದಿಂದಲೂ ಬಾಂಗ್ಲಾದೇಶದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. 1971ರ ವಿಮೋಚನಾ ಯುದ್ಧದ ನಂತರ ಮತ್ತು ಪದೇ ಪದೇ ಸಂಭವಿಸುವ ಪ್ರವಾಹಗಳ ಸಮಯದಲ್ಲಿ ಅದರ “ಫುಡ್ ಫಾರ್ ಲೈಫ್” ಕಾರ್ಯಕ್ರಮವು ಲಕ್ಷಾಂತರ ಜನರಿಗೆ ಆಹಾರವನ್ನು ಒದಗಿಸಿದೆ. ಧರ್ಮದ ಭೇದವಿಲ್ಲದೆ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಹಲವಾರು ಶಾಲೆಗಳನ್ನು, ಅನಾಥಾಶ್ರಮಗಳನ್ನು ಮತ್ತು ವೃದ್ಧಾಶ್ರಮಗಳನ್ನು ನಡೆಸುತ್ತಿದೆ.
ಇದನ್ನೂ ಓದಿ:ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನೆಡೆ | RSS ಪಥಸಂಚಲನ ನಿರ್ಬಂಧಕ್ಕೆ ಹೈಕೋರ್ಟ್ ಮಧ್ಯಂತರ ತಡೆ!



















