ನವದೆಹಲಿ: ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಡುವೆ ಸೆಮಿಕಂಡಕ್ಟರ್ ಹೂಡಿಕೆ ವಿಚಾರವಾಗಿ ಆರಂಭವಾದ ವಾಕ್ಸಮರ ಈಗ ತಾರಕಕ್ಕೇರಿದೆ. ಪ್ರಿಯಾಂಕ್ ಖರ್ಗೆಯವರನ್ನು “ಫಸ್ಟ್ ಕ್ಲಾಸ್ ಈಡಿಯಟ್” ಎಂದು ಕರೆದಿದ್ದ ಹಿಮಂತ್ ಶರ್ಮಾ ಹೇಳಿಕೆಗೆ ಖರ್ಗೆ ತಿರುಗೇಟು ನೀಡಿದ ಬೆನ್ನಲ್ಲೇ, ಇದೀಗ ಅಸ್ಸಾಂ ಬಿಜೆಪಿ ಘಟಕವು “ಹಲೋ, ಟೆಡ್ಡಿ ಬಾಯ್” ಎಂದು ವ್ಯಂಗ್ಯವಾಡಿ, ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪ್ರಬಂಧ ಬರೆದರೆ ಪರಿಣಿತರಾಗಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಬಗ್ಗೆ ಲೇವಡಿ ಮಾಡಿದೆ.
ವಾಕ್ಸಮರಕ್ಕೆ ಕಾರಣವೇನು?
ಕರ್ನಾಟಕಕ್ಕೆ ಬರಬೇಕಿದ್ದ ಸೆಮಿಕಂಡಕ್ಟರ್ ಹೂಡಿಕೆಗಳನ್ನು ಕೇಂದ್ರ ಸರ್ಕಾರವು “ಬಲವಂತವಾಗಿ” ಗುಜರಾತ್ ಮತ್ತು ಅಸ್ಸಾಂಗೆ ತಿರುಗಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. “ಸೆಮಿಕಂಡಕ್ಟರ್ ಕಂಪನಿಗಳು ಬೆಂಗಳೂರಿಗೆ ಬರಲು ಬಯಸುತ್ತಿದ್ದರೂ, ಅವು ಅಸ್ಸಾಂ ಮತ್ತು ಗುಜರಾತ್‌ಗೆ ಏಕೆ ಹೋಗುತ್ತಿವೆ? ಕರ್ನಾಟಕಕ್ಕೆ ಮೀಸಲಾದ ಎಲ್ಲಾ ಹೂಡಿಕೆಗಳನ್ನು ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಬೇರೆಡೆಗೆ ಕೊಂಡೊಯ್ಯುತ್ತಿದೆ,” ಎಂದು ಅವರು ಆರೋಪಿಸಿದ್ದರು.
ಶರ್ಮಾ ತೀಕ್ಷ್ಣ ಪ್ರತಿಕ್ರಿಯೆ
ಖರ್ಗೆಯವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಹಿಮಂತ ಬಿಸ್ವಾ ಶರ್ಮಾ, ಅವರನ್ನು “ಪ್ರಥಮ ದರ್ಜೆ ಈಡಿಯಟ್” ಎಂದು ಕರೆದಿದ್ದರು. ಖರ್ಗೆಯವರ ಮಾತುಗಳು ಅಸ್ಸಾಂನ ವಿದ್ಯಾವಂತ ಯುವಕರಿಗೆ ಮಾಡಿದ ಅವಮಾನವಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಾರ ಚಿಂತಿಸುತ್ತಿದೆ ಎಂದು ಎಚ್ಚರಿಸಿದ್ದರು.
ಖರ್ಗೆಯಿಂದ ತಿರುಗೇಟು
ಇದಕ್ಕೆ ಪ್ರತ್ಯುತ್ತರ ನೀಡಿದ್ದ ಪ್ರಿಯಾಂಕ್ ಖರ್ಗೆ, ಹಿಮಂತ ಶರ್ಮಾ ಅವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ರಾಜಕೀಯ ಬಣ್ಣ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದರು. “ನನ್ನ ಹೇಳಿಕೆ ಸ್ಪಷ್ಟವಾಗಿದೆ. ಕರ್ನಾಟಕದ ಪ್ರತಿಭೆ ಮತ್ತು ಪರಿಸರ ವ್ಯವಸ್ಥೆಯನ್ನು ಮೆಚ್ಚಿ ಇಲ್ಲಿಗೆ ಬರಲು ಬಯಸಿದ್ದ ಸೆಮಿಕಂಡಕ್ಟರ್ ಕಂಪನಿಗಳ ಮೇಲೆ ಗುಜರಾತ್ ಮತ್ತು ಅಸ್ಸಾಂನಲ್ಲಿ ಘಟಕ ಸ್ಥಾಪಿಸಲು ಹೇಗೆ ಒತ್ತಡ ಹೇರಲಾಗುತ್ತಿದೆ ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ಅಸ್ಸಾಂನ ಯುವಕರು ಉದ್ಯೋಗಕ್ಕಾಗಿ ರಾಜ್ಯವನ್ನು ಏಕೆ ತೊರೆಯುತ್ತಿದ್ದಾರೆ ಎಂಬುದರ ಬಗ್ಗೆ ಶರ್ಮಾ ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ಖರ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
“ಶರ್ಮಾ ಅವರು ತಮ್ಮ ಸಂಪತ್ತನ್ನು ಮಾತ್ರ ಬೆಳೆಸಿಕೊಂಡಿದ್ದಾರೆ. ಪ್ರತಿಯೊಂದು ದೊಡ್ಡ ಹಗರಣ ಅಥವಾ ಭ್ರಷ್ಟಾಚಾರದ ಪ್ರಕರಣ ಅವರ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ. ಆದರೆ ಅಸ್ಸಾಂನ ಯುವಕರು ಉದ್ಯೋಗ ಮತ್ತು ಅವಕಾಶಗಳಿಂದ ವಂಚಿತರಾಗಿದ್ದಾರೆ” ಎಂದು ಖರ್ಗೆ ಗಂಭೀರ ಆರೋಪ ಮಾಡಿದ್ದರು.
“ಟೆಡ್ಡಿ ಬಾಯ್” ಎಂದ ಅಸ್ಸಾಂ ಬಿಜೆಪಿ
ಈ ಜಟಾಪಟಿಗೆ ಇದೀಗ ಅಸ್ಸಾಂ ಬಿಜೆಪಿ ಕೂಡ ಧುಮುಕಿದ್ದು, ಖರ್ಗೆಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, “ಹಲೋ ಟೆಡ್ಡಿ ಬಾಯ್, ಎಕ್ಸ್‌ನಲ್ಲಿ ದೀರ್ಘ ಪ್ರಬಂಧ ಬರೆದರೆ ನೀವು ‘ಸೆಮಿಕಂಡಕ್ಟರ್ ಪರಿಣಿತ’ ಆಗುವುದಿಲ್ಲ. ಅಸ್ಸಾಂ ಬಗ್ಗೆ ಉಪನ್ಯಾಸ ನೀಡುವ ಬದಲು, ದಕ್ಷಿಣ ಭಾರತದಲ್ಲೇ ಬಡತನದಲ್ಲಿ ಅಗ್ರಸ್ಥಾನದಲ್ಲಿರುವ ನಿಮ್ಮ ಸ್ವಂತ ಜಿಲ್ಲೆಯತ್ತ ಒಮ್ಮೆ ನೋಡಿ. ನಿಮ್ಮ ‘ಟ್ಯಾಲೆಂಟ್ ಟ್ಯಾಂಕ್’ ಇದೇನಾ?” ಎಂದು ಪ್ರಶ್ನಿಸುವ ಮೂಲಕ ಲೇವಡಿ ಮಾಡಿದೆ.
ಇದನ್ನೂ ಓದಿ: ಬಾಂಗ್ಲಾ ಗಡಿಯಲ್ಲಿ ಹಫೀಜ್ ಸಯೀದ್ ಆಪ್ತ: ಭಾರತದ ಭದ್ರತೆಗೆ ಹೆಚ್ಚಿದ ಆತಂಕ, ಈಶಾನ್ಯ ರಾಜ್ಯಗಳ ಅಸ್ಥಿರತೆಗೆ ಸಂಚು?



















