ನವದೆಹಲಿ: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ಭರ್ಜರಿ ಫಾರ್ಮ್‌ನಲ್ಲಿದ್ದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ಗಾಯದ ಕಾರಣ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಸ್ಫೋಟಕ ಬ್ಯಾಟರ್ ಶಫಾಲಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ 30ರಂದು ನವಿ ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನವೇ, ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿಯಾಗಿದ್ದ ಪ್ರತೀಕಾ ರಾವಲ್ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಭಾನುವಾರ ಬಾಂಗ್ಲಾದೇಶ ವಿರುದ್ಧದ ಲೀಗ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಪ್ರತೀಕಾ ಅವರ ಬಲಗಾಲಿನ ಪಾದ ತಿರುಚಿ ಗಂಭೀರ ಗಾಯವಾಗಿತ್ತು. ನೋವಿನಿಂದ ಬಳಲುತ್ತಿದ್ದ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಗಿತ್ತು. ಇದೀಗ ಅವರು ಟೂರ್ನಿಯಿಂದಲೇ ಹೊರಗುಳಿಯುವುದು ಖಚಿತವಾಗಿದೆ.
ಶಫಾಲಿ ವರ್ಮಾಗೆ ಅವಕಾಶ
ಪ್ರತೀಕಾ ರಾವಲ್ ಅವರ ಬದಲಿಗೆ, ಯುವ ಸ್ಫೋಟಕ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿದೆ. ಸುಮಾರು ಒಂದು ವರ್ಷದ ನಂತರ ಶಫಾಲಿ ಅವರು ಭಾರತದ ಏಕದಿನ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಅವರನ್ನು ಆರಂಭದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡದಿರುವುದು ಅಚ್ಚರಿಗೆ ಕಾರಣವಾಗಿತ್ತು.
ಫಾರ್ಮ್‌ನಲ್ಲಿದ್ದ ಪ್ರತೀಕಾ, ಕಮ್‌ಬ್ಯಾಕ್ ಮಾಡಿದ ಶಫಾಲಿ
ಈ ವಿಶ್ವಕಪ್‌ನಲ್ಲಿ ಪ್ರತೀಕಾ ರಾವಲ್ 6 ಇನ್ನಿಂಗ್ಸ್‌ಗಳಲ್ಲಿ 51.33ರ ಸರಾಸರಿಯಲ್ಲಿ 308 ರನ್ ಗಳಿಸಿ, ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿ ತಂಡವನ್ನು ಸೆಮಿಫೈನಲ್‌ಗೆ ತಲುಪಲು ನೆರವಾಗಿದ್ದರು.
ಇತ್ತ, ಶಫಾಲಿ ವರ್ಮಾ ಕೂಡ ಇತ್ತೀಚೆಗೆ ನಡೆದ ಹಿರಿಯರ ಮಹಿಳಾ ಟಿ20 ಟೂರ್ನಿಯಲ್ಲಿ 9 ಪಂದ್ಯಗಳಿಂದ 341 ರನ್ ಗಳಿಸಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು. ಜೊತೆಗೆ, ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡದ ಪರ 49 ಎಸೆತಗಳಲ್ಲಿ 70 ರನ್ ಚಚ್ಚಿದ್ದರು. ಅವರ ಸ್ಪೋಟಕ ಬ್ಯಾಟಿಂಗ್, ಸೆಮಿಫೈನಲ್‌ನಲ್ಲಿ ಸ್ಮೃತಿ ಮಂಧಾನಾ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದ್ದು, ತಂಡಕ್ಕೆ ಬಲ ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂಓದಿ : ಲೈಂಗಿಕ ದೌರ್ಜನ್ಯ ಆರೋಪ | ಪಿಐ, ಎಎಸ್ಐ ಸಸ್ಪೆಂಡ್



















