ನವದೆಹಲಿ: ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ ಮತ್ತು ಜಾಗತಿಕ ಉಗ್ರ ಹಫೀಜ್ ಸಯೀದ್‌ನ ಆಪ್ತ ಸಹಾಯಕ ಇಬ್ರಿಸಾಮ್ ಇಲಾಹಿ ಜಹೀರ್, ಬಾಂಗ್ಲಾದೇಶದಲ್ಲಿ ಭಾರತದ ಗಡಿಗೆ ಹೊಂದಿಕೊಂಡಂತೆ ಚಟುವಟಿಕೆಗಳನ್ನು ನಡೆಸುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಇದು ಭಾರತದ ಭದ್ರತಾ ಸಂಸ್ಥೆಗಳ ಕಳವಳಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಮರ್ಕಜಿ ಜಮಿಯತ್ ಅಹ್ಲ್-ಎ-ಹದೀಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಜಹೀರ್, ಸ್ಥಳೀಯ ಮೂಲಭೂತವಾದಿ ಗುಂಪುಗಳೊಂದಿಗೆ ಸೇರಿ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದು, ಇದು ಈಶಾನ್ಯ ಭಾರತವನ್ನು ಅಸ್ಥಿರಗೊಳಿಸುವ ದೊಡ್ಡ ಸಂಚಿನ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.
ಭಾರತದ ಗಡಿ ಜಿಲ್ಲೆಗಳಲ್ಲಿ ಪ್ರವಾಸ
ಅಕ್ಟೋಬರ್ 25ರಂದು ಢಾಕಾಗೆ ಆಗಮಿಸಿದ ಜಹೀರ್, ಎರಡು ದಿನಗಳಲ್ಲಿ ರಾಜ್‌ಶಾಹಿ ಮತ್ತು ಚಪೈನ್‌ವಾಬ್‌ಗಂಜ್‌ನಂತಹ ಸೂಕ್ಷ್ಮ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾನೆ. ಈ ವಾರ ರಂಗ್‌ಪುರಕ್ಕೂ ಭೇಟಿ ನೀಡುವ ಕಾರ್ಯಕ್ರಮವಿದೆ. ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಇದು ಗಡಿ ಭಾಗಕ್ಕೆ ಆತನ ಎರಡನೇ ಭೇಟಿಯಾಗಿದೆ. ಆತನ ಈ ಗಡಿ ಭಾಗದ ಪ್ರವಾಸಗಳು ಮತ್ತು ಸಲಫಿ ಸಮ್ಮೇಳನದಲ್ಲಿ ಭಾಗವಹಿಸುವಿಕೆ, ಪಾಕಿಸ್ತಾನ-ಬಾಂಗ್ಲಾದೇಶದ ಮೈತ್ರಿಯು ಈಶಾನ್ಯ ಭಾರತದಲ್ಲಿ ಅಸ್ಥಿರತೆ ಸೃಷ್ಟಿಸುವ ಗುರಿಯನ್ನು ಹೊಂದಿದೆಯೇ ಎಂಬ ಆತಂಕವನ್ನು ಹೆಚ್ಚಿಸಿದೆ.
ಪ್ರಚೋದನಾಕಾರಿ ಭಾಷಣ, ಕಾಶ್ಮೀರ ಪ್ರಸ್ತಾಪ
ಚಪೈನ್‌ವಾಬ್‌ಗಂಜ್‌ನಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣದಲ್ಲಿ ಜಹೀರ್, “ಇಸ್ಲಾಂ ಧರ್ಮಕ್ಕಾಗಿ ನಿಮ್ಮನ್ನು ನೀವು ತ್ಯಾಗ ಮಾಡಲು ಸಿದ್ಧರಾಗಿರಬೇಕು. ನಿಮ್ಮ ಮಕ್ಕಳನ್ನೂ ತ್ಯಾಗ ಮಾಡಲು ಸಿದ್ಧರಿರಬೇಕು. ಜಾತ್ಯತೀತ ಮತ್ತು ಉದಾರವಾದಿ ಶಕ್ತಿಗಳನ್ನು ಎದುರಿಸಲು ನಾವು ಸಿದ್ಧರಾಗಿ ನಿಲ್ಲಬೇಕು. ಪಾಕಿಸ್ತಾನದಿಂದ ಬಾಂಗ್ಲಾದೇಶದವರೆಗೆ ಎಲ್ಲಾ ಮುಸ್ಲಿಮರು ಜಾತ್ಯತೀತರ ವಿರುದ್ಧ ಒಂದಾಗುತ್ತಾರೆ” ಎಂದು ಕರೆ ನೀಡಿದ್ದಾನೆ.
ಇದೇ ವೇಳೆ ಕಾಶ್ಮೀರದ ವಿಷಯ ಪ್ರಸ್ತಾಪಿಸಿ, “ಕಾಶ್ಮೀರಿಗಳು ತಮ್ಮ ಸ್ವಾತಂತ್ರ್ಯದಿಂದ ವಂಚಿತರಾಗಿದ್ದಾರೆ. ಭಾರತೀಯ ಕಾಶ್ಮೀರದಲ್ಲಿನ ಇಸ್ಲಾಂ ವಿರೋಧಿ ಕಾನೂನುಗಳು ಮತ್ತು ದಬ್ಬಾಳಿಕೆಯ ಕೃತ್ಯಗಳ ವಿರುದ್ಧ ಪಾಕಿಸ್ತಾನವು ಬಲವಾದ ಧ್ವನಿ ಎತ್ತುವುದು ಅದರ ಜವಾಬ್ದಾರಿಯಾಗಿದೆ. ಅಲ್ಲಾಹನ ಕೃಪೆಯಿಂದ, ಕಾಶ್ಮೀರ ಪಾಕಿಸ್ತಾನದ ಭಾಗವಾಗುವ ದಿನ ಬರುತ್ತದೆ” ಎಂದು ಹೇಳಿದ್ದಾನೆ.
ಜಾಗತಿಕ ಉಗ್ರರೊಂದಿಗೆ ನಂಟು
ಇಬ್ರಿಸಾಮ್ ಇಲಾಹಿ ಜಹೀರ್, ಹಫೀಜ್ ಸಯೀದ್ ಮತ್ತು ಆತನ ಸಹಚರರೊಂದಿಗೆ 24 ವರ್ಷಗಳಿಗೂ ಹೆಚ್ಚು ಕಾಲದಿಂದ ನಂಟು ಹೊಂದಿದ್ದಾನೆ. ಅಲ್ಲದೆ, ಭಾರತದಿಂದ ಪರಾರಿಯಾಗಿರುವ ಮೂಲಭೂತವಾದಿ ಬೋಧಕ ಜಾಕೀರ್ ನಾಯ್ಕ್ ಜೊತೆಗೂ ಈತ ನಿಕಟ ಸಂಪರ್ಕ ಹೊಂದಿದ್ದಾನೆ. 2024ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗ ಜಾಕೀರ್ ನಾಯ್ಕ್, ಜಹೀರ್‌ನನ್ನು ಭೇಟಿಯಾಗಿದ್ದ. ನವೆಂಬರ್ 6-7ರಂದು ರಾಜ್‌ಶಾಹಿಯಲ್ಲಿ ನಡೆಯಲಿರುವ ಬೃಹತ್ ಸಲಾಫಿ ಸಮ್ಮೇಳನದಲ್ಲಿ ಜಹೀರ್ ಭಾಷಣ ಮಾಡಲಿದ್ದು, ನವೆಂಬರ್ 8ರಂದು ಪಾಕಿಸ್ತಾನಕ್ಕೆ ಮರಳುವ ನಿರೀಕ್ಷೆಯಿದೆ. ಆತನ ಈ ಭೇಟಿಯ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ | ಪಿಐ, ಎಎಸ್ಐ ಸಸ್ಪೆಂಡ್



















