ಕಾನ್ಪುರ: ಔಷಧ ಅಂಗಡಿಯಲ್ಲಿ ಶುರುವಾದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ, 22 ವರ್ಷದ ಕಾನೂನು ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ದುಷ್ಕರ್ಮಿಗಳು ವಿದ್ಯಾರ್ಥಿಯ ಹೊಟ್ಟೆಯನ್ನು ಬಗೆದು, ಕೈ ಬೆರಳುಗಳನ್ನು ಕತ್ತರಿಸಿ ಹಾಕಿ, ರಾಕ್ಷಸರಂತೆ ವರ್ತಿಸಿದ್ದಾರೆ.
ಕಾನ್ಪುರ ವಿಶ್ವವಿದ್ಯಾಲಯದ ಮೊದಲ ವರ್ಷದ ಕಾನೂನು ವಿದ್ಯಾರ್ಥಿ ಅಭಿಜಿತ್ ಸಿಂಗ್ ಚಂದೇಲ್ ಹಲ್ಲೆಗೊಳಗಾದವರು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ತಲೆಗೆ 14 ಹೊಲಿಗೆಗಳನ್ನು ಹಾಕಲಾಗಿದೆ.
ನಡೆದಿದ್ದೇನು?
ಔಷಧಿಯೊಂದರ ಬೆಲೆಗೆ ಸಂಬಂಧಿಸಿದಂತೆ ಕಾನೂನು ವಿದ್ಯಾರ್ಥಿ ಅಭಿಜಿತ್ ಮತ್ತು ಔಷಧ ಅಂಗಡಿಯ ಸಿಬ್ಬಂದಿ ಅಮರ್ ಸಿಂಗ್ ನಡುವೆ ಭಾನುವಾರ ಸಂಜೆ ವಾಗ್ವಾದ ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಈ ಜಗಳ ತಾರಕಕ್ಕೇರಿದ್ದು, ಅಮರ್ ಸಿಂಗ್‌ನ ಸಹೋದರ ವಿಜಯ್ ಸಿಂಗ್ ಹಾಗೂ ಪ್ರಿನ್ಸ್ ರಾಜ್ ಶ್ರೀವಾಸ್ತವ ಮತ್ತು ನಿಖಿಲ್ ಎಂಬ ಇನ್ನಿಬ್ಬರು ಸೇರಿಕೊಂಡು ಅಭಿಜಿತ್ ಮೇಲೆ ಹಲ್ಲೆ ನಡೆಸಿದ್ದಾರೆ.
ನಾಲ್ವರೂ ಸೇರಿ ಅಭಿಜಿತ್ ತಲೆಗೆ ಮೊದಲು ಹೊಡೆದಿದ್ದಾರೆ. ತೀವ್ರ ಗಾಯಗೊಂಡ ಅವರು ರಕ್ತದ ಮಡುವಿನಲ್ಲಿ ನೆಲಕ್ಕೆ ಬಿದ್ದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ದುಷ್ಕರ್ಮಿಗಳು, ನಂತರ ಹರಿತವಾದ ವಸ್ತುವಿನಿಂದ ಅಭಿಜಿತ್ ಅವರ ಹೊಟ್ಟೆಯನ್ನೇ ಬಗೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದರೂ, ಅಭಿಜಿತ್ ಪ್ರಾಣ ಉಳಿಸಿಕೊಳ್ಳಲು ಮನೆಯತ್ತ ಓಡಲು ಪ್ರಯತ್ನಿಸಿದ್ದಾರೆ. ಆದರೆ, ಅವರನ್ನು ಬೆನ್ನಟ್ಟಿದ ಹಲ್ಲೆಕೋರರು, ಅವರನ್ನು ಹಿಡಿದು ಒಂದು ಕೈಯ ಎರಡು ಬೆರಳುಗಳನ್ನು ಕತ್ತರಿಸಿ ಹಾಕಿದ್ದಾರೆ. ಅಭಿಜಿತ್ ಅವರ ಚೀರಾಟ ಕೇಳಿ ಸ್ಥಳೀಯರು ಸಹಾಯಕ್ಕೆ ದೌಡಾಯಿಸಿದ್ದು, ಇದನ್ನು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಸತಾರಾ ವೈದ್ಯೆ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ವೈದ್ಯೆಯ ವಿರುದ್ಧ ಮಹಿಳೆ ಗಂಭೀರ ಆರೋಪ!



















