ಕೇರಳ: ಭೂಕುಸಿತ ಉಂಟಾದರೆ ಜೀವಕ್ಕೆ ಅಪಾಯ ಆಗಬಹುದು ಎಂಬ ಕಾರಣಕ್ಕೆ ಆ ವ್ಯಕ್ತಿಯನ್ನು ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. ಆದರೂ, ಅವರು ಅದೇ ದಿನ ಭೂಕುಸಿತಕ್ಕೆ ಬಲಿಯಾಗಿದ್ದಾರೆ. ವಿಧಿಯಾಟದ ಮುಂದೆ ಯಾವುದೂ ನಡೆಯಲ್ಲ ಎಂಬುವುದು ಇದರಿಂದ ಸಾಬೀತಾದಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದಾಗಿ ಉಂಟಾದ ಭೂಕುಸಿತದಲ್ಲಿ 48 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ಕೇರಳದ ಅಡಿಮಾಲಿಯ ಮನ್ನಂಖಂಡಂನಲ್ಲಿ ಶನಿವಾರ ರಾತ್ರಿ ನಡೆದಿದೆ. ಲಕ್ಶಂವೀಡು ಉನ್ನತಿ ಕಾಲೋನಿಯ ನಿವಾಸಿ ಬಿಜು ಮೃತಪಟ್ಟ ದುರ್ದೈವಿ.
ಅಡಿಮಾಲಿ ಸಮೀಪ ರಾಷ್ಟ್ರೀಯ ಹೆದ್ದಾರಿ-85ರ ವಿಸ್ತರಣೆ ಕಾಮಗಾರಿಗಾಗಿ ಗುಡ್ಡವನ್ನು ಅಗೆಯಲಾಗುತ್ತಿತ್ತು. ಇದರ ಕೆಳಭಾಗದಲ್ಲಿದ್ದ ವಸತಿ ಕಾಲೋನಿಯಲ್ಲಿ ಭೂಕುಸಿತದ ಭೀತಿ ಎದುರಾಗಿತ್ತು. ಹೀಗಾಗಿ, ಪಂಚಾಯತ್ ಅಧಿಕಾರಿಗಳು ಶನಿವಾರ ಸಂಜೆ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ 22 ಕುಟುಂಬಗಳನ್ನು ಅಡಿಮಾಲಿಯ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಿದ್ದರು.
ಆದರೆ, ಬಿಜು ಮತ್ತು ಅವರ ಪತ್ನಿ ಸಂಧ್ಯಾ ರಾತ್ರಿ ಊಟ ತಯಾರಿಸಲು ತಮ್ಮ ಮನೆಗೆ ವಾಪಸಾಗಿದ್ದರು. ರಾತ್ರಿ ಸುಮಾರು 10:30ರ ಸಮಯದಲ್ಲಿ, ಅವರು ಮನೆಯಲ್ಲಿದ್ದಾಗಲೇ ಗುಡ್ಡದ ಮಣ್ಣು ಕುಸಿದು ಅವರ ಮನೆಯ ಮೇಲೆ ಬಿದ್ದಿದೆ. ಈ ದುರಂತದಲ್ಲಿ ಸುಮಾರು ಎಂಟು ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ.
ಐದು ಗಂಟೆಗಳ ರಕ್ಷಣಾ ಕಾರ್ಯಾಚರಣೆ
ಸ್ಥಳೀಯರು ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಸುಮಾರು ಐದು ಗಂಟೆಗಳ ಸತತ ಕಾರ್ಯಾಚರಣೆಯ ನಂತರ, ಅವಶೇಷಗಳಡಿ ಸಿಲುಕಿದ್ದ ದಂಪತಿಯನ್ನು ಹೊರತೆಗೆಯಲಾಯಿತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಬಿಜು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಸಂಧ್ಯಾ ಅವರನ್ನು ಮೊದಲು ಅಡಿಮಾಲಿ ಆಸ್ಪತ್ರೆಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಲುವಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಅವೈಜ್ಞಾನಿಕ ಕಾಮಗಾರಿಯೇ ಕಾರಣವೆಂದು ಆರೋಪ
“ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಹೆದ್ದಾರಿ ಕಾಮಗಾರಿಗಾಗಿ ಮಣ್ಣು ತೆಗೆಯಲಾಗುತ್ತಿತ್ತು. ಭೂಕುಸಿತದ ಅಪಾಯವನ್ನು ಪರಿಗಣಿಸದೆ ಗುಡ್ಡವನ್ನು ಅಗೆಯುತ್ತಿರುವುದೇ ಈ ದುರಂತಕ್ಕೆ ಕಾರಣ” ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗುಡ್ಡದಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕಾಮಗಾರಿ ನಿಲ್ಲಿಸಿರಲಿಲ್ಲ ಎಂದು ನಿವಾಸಿಯೊಬ್ಬರು ದೂರಿದ್ದಾರೆ.
ಅಡಿಮಾಲಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಳೆದ ವರ್ಷವಷ್ಟೇ ತಮ್ಮ ಮಗನನ್ನು ಕಳೆದುಕೊಂಡಿದ್ದ ಬಿಜು ಅವರ ಕುಟುಂಬಕ್ಕೆ ಈ ಘಟನೆ ಮತ್ತೊಂದು ಆಘಾತ ತಂದಿದೆ. ಅವರ ಪುತ್ರಿ ಕೊಟ್ಟಾಯಂನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾರೆ. “ನಮಗೆ ಬೇರೆಲ್ಲೂ ಹೋಗಲು ಜಾಗವಿಲ್ಲ. ಸರ್ಕಾರ ನಮಗೆ ಪುನರ್ವಸತಿ ಕಲ್ಪಿಸಬೇಕು” ಎಂದು ಸಂತ್ರಸ್ತರು ಮನವಿ ಮಾಡಿದ್ದಾರೆ.



















