ನವದೆಹಲಿ: 2001ರ ಸೆಪ್ಟೆಂಬರ್ 11ರ ದಾಳಿಯ ನಂತರ ಅಮೆರಿಕದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಅಲ್-ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್, ಅಫ್ಘಾನಿಸ್ತಾನದ ತೋರಾ ಬೋರಾ ಬೆಟ್ಟಗಳಿಂದ ಮಹಿಳೆಯ ವೇಷದಲ್ಲಿ ಪಲಾಯನ ಮಾಡಿದ್ದ ಎಂದು ಸಿಐಎ ಮಾಜಿ ಅಧಿಕಾರಿ ಜಾನ್ ಕಿರಿಯಾಕೋ ಬಹಿರಂಗಪಡಿಸಿದ್ದಾರೆ.
15 ವರ್ಷಗಳ ಕಾಲ ಸಿಐಎಯಲ್ಲಿ ಸೇವೆ ಸಲ್ಲಿಸಿ, ಪಾಕಿಸ್ತಾನದಲ್ಲಿ ಸಿಐಎಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದ ಕಿರಿಯಾಕೋ ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್‌ನ ಕಮಾಂಡರ್‌ಗೆ ಭಾಷಾಂತರಕಾರನಾಗಿದ್ದ ವ್ಯಕ್ತಿಯೇ ಅಲ್-ಖೈದಾದ ಏಜೆಂಟ್ ಆಗಿದ್ದ ಎಂಬ ಆಘಾತಕಾರಿ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ.
ತೋರಾ ಬೋರಾದಿಂದ ಪಲಾಯನ
“ಅಕ್ಟೋಬರ್ 2001ರಲ್ಲಿ ನಾವು ಒಸಾಮಾ ಬಿನ್ ಲಾಡೆನ್ ಮತ್ತು ಅಲ್-ಖೈದಾ ನಾಯಕತ್ವವನ್ನು ತೋರಾ ಬೋರಾ ಬೆಟ್ಟಗಳಲ್ಲಿ ಸುತ್ತುವರಿದಿದ್ದೆವು. ನಮ್ಮ ಸೆಂಟ್ರಲ್ ಕಮಾಂಡ್‌ನ ಕಮಾಂಡರ್‌ನ ಭಾಷಾಂತರಕಾರನೇ ಅಮೆರಿಕ ಸೇನೆಯೊಳಗೆ ನುಸುಳಿದ್ದ ಅಲ್-ಖೈದಾ ಏಜೆಂಟ್ ಎಂಬುದು ನಮಗೆ ತಿಳಿದಿರಲಿಲ್ಲ,” ಎಂದು ಕಿರಿಯಾಕೋ ವಿವರಿಸಿದ್ದಾರೆ.
“ನಾವು ಬಿನ್ ಲಾಡೆನ್‌ನನ್ನು ಬೆಟ್ಟದಿಂದ ಕೆಳಗಿಳಿದು ಶರಣಾಗುವಂತೆ ಹೇಳಿದೆವು. ಆಗ ಆತ ಭಾಷಾಂತರಕಾರನ ಮೂಲಕ, ‘ಬೆಳಗಿನ ಜಾವದವರೆಗೆ ಸಮಯ ಕೊಡಿ, ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸಿ ನಾವು ಶರಣಾಗುತ್ತೇವೆ’ ಎಂದು ಕೇಳಿಕೊಂಡ. ಈ ಮನವಿಯನ್ನು ಒಪ್ಪಿಕೊಳ್ಳುವಂತೆ ಭಾಷಾಂತರಕಾರ ನಮ್ಮ ಜನರಲ್ ಫ್ರಾಂಕ್ಸ್‌ಗೆ ಮನವರಿಕೆ ಮಾಡಿಕೊಟ್ಟ. ಆದರೆ, ಕತ್ತಲಾಗುತ್ತಿದ್ದಂತೆ ಬಿನ್ ಲಾಡೆನ್ ಮಹಿಳೆಯ ವೇಷ ಧರಿಸಿ ಪಿಕ್‌ಅಪ್ ಟ್ರಕ್‌ನಲ್ಲಿ ಪಾಕಿಸ್ತಾನಕ್ಕೆ ಪರಾರಿಯಾದ. ಬೆಳಗಾದಾಗ ಅಲ್ಲಿ ಶರಣಾಗಲು ಯಾರೂ ಇರಲಿಲ್ಲ,” ಎಂದು ಕಿರಿಯಾಕೋ ತಿಳಿಸಿದ್ದಾರೆ.
ಪಾಕಿಸ್ತಾನ ಮತ್ತು ಮುಷರಫ್ ಪಾತ್ರ
ಅಂದಿನ ಪಾಕಿಸ್ತಾನದ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರೊಂದಿಗೆ ಅಮೆರಿಕ ಉತ್ತಮ ಸಂಬಂಧ ಹೊಂದಿತ್ತು ಎಂದು ಹೇಳಿದ ಕಿರಿಯಾಕೋ, “ನಾವು ಮುಷರಫ್‌ರನ್ನು ಖರೀದಿಸಿದ್ದೆವು. ಮಿಲಿಟರಿ ಮತ್ತು ಆರ್ಥಿಕ ನೆರವಿನ ರೂಪದಲ್ಲಿ ಲಕ್ಷಾಂತರ ಡಾಲರ್‌ಗಳನ್ನು ನೀಡಿದ್ದೆವು. ಇದರಿಂದಾಗಿ ಪಾಕಿಸ್ತಾನದಲ್ಲಿ ನಾವು ಏನು ಬೇಕಾದರೂ ಮಾಡಲು ಅವರು ನಮಗೆ ಅವಕಾಶ ನೀಡುತ್ತಿದ್ದರು,” ಎಂದಿದ್ದಾರೆ.
ಆದಾಗ್ಯೂ, ಮುಷರಫ್ ತಮ್ಮ ಸೇನೆಯನ್ನು ಸಂತಸಪಡಿಸಬೇಕಿತ್ತು. ಪಾಕ್ ಸೇನೆಗೆ ಅಲ್-ಖೈದಾಕ್ಕಿಂತ ಭಾರತದ ಬಗ್ಗೆಯೇ ಹೆಚ್ಚು ಕಾಳಜಿ ಇತ್ತು. ಹೀಗಾಗಿ, ಮುಷರಫ್ ಒಂದು ಕಡೆ ಅಮೆರಿಕದೊಂದಿಗೆ ಭಯೋತ್ಪಾದನಾ ನಿಗ್ರಹಕ್ಕೆ ಸಹಕರಿಸುವಂತೆ ನಟಿಸುತ್ತಾ, ಇನ್ನೊಂದು ಕಡೆ ಭಾರತದ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದ್ವಂದ್ವ ನೀತಿ ಅನುಸರಿಸುತ್ತಿದ್ದರು ಎಂದು ಕಿರಿಯಾಕೋ ಆರೋಪಿಸಿದ್ದಾರೆ.
ಲಷ್ಕರ್-ಅಲ್ ಖೈದಾ ನಂಟು
“ಮಾರ್ಚ್ 2002ರಲ್ಲಿ, ನಾವು ಲಾಹೋರ್‌ನಲ್ಲಿದ್ದ ಲಷ್ಕರ್-ಎ-ತೊಯ್ಬಾ ಸೇಫ್‌ಹೌಸ್ ಮೇಲೆ ದಾಳಿ ನಡೆಸಿದೆವು. ಅಲ್ಲಿ ಅಲ್ ಖೈದಾದ ತರಬೇತಿ ಕೈಪಿಡಿ ಸಿಕ್ಕಿತು. ಅದರಿಂದಾಗಿ ಅದೇ ಮೊದಲ ಬಾರಿಗೆ ಲಷ್ಕರ್-ಎ-ತೊಯ್ಬಾ ಮತ್ತು ಅಲ್-ಖೈದಾ ನಡುವಿನ ಸಂಪರ್ಕವನ್ನು ನಾವು ವಿಶ್ಲೇಷಣಾತ್ಮಕವಾಗಿ ಸಾಬೀತುಪಡಿಸಲು ಸಾಧ್ಯವಾಯಿತು,” ಎಂದು ಅವರು ಬಹಿರಂಗಪಡಿಸಿದ್ದಾರೆ.
ಅಮೆರಿಕಕ್ಕೆ ಆ ಸಮಯದಲ್ಲಿ ಪಾಕಿಸ್ತಾನದ ಸಹಕಾರ ಅತ್ಯಗತ್ಯವಾಗಿತ್ತು. ಬಲೂಚಿಸ್ತಾನದಲ್ಲಿ ಡ್ರೋನ್ ನೆಲೆಗಳನ್ನು ಸ್ಥಾಪಿಸಲು ಪಾಕಿಸ್ತಾನದ ನೆರವು ಬೇಕಾಗಿದ್ದರಿಂದ, ಭಾರತ-ಪಾಕಿಸ್ತಾನದ ವಿಷಯಕ್ಕಿಂತ ಪಾಕಿಸ್ತಾನದೊಂದಿಗಿನ ಸಂಬಂಧವೇ ದೊಡ್ಡದು ಎಂದು ಶ್ವೇತಭವನ ನಿರ್ಧರಿಸಿತ್ತು ಎಂದು ಕಿರಿಯಾಕೋ ಅಂದಿನ ಅಮೆರಿಕದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನಂತರ, ಅಮೆರಿಕವು ಒಸಾಮಾ ಬಿನ್ ಲಾಡೆನ್‌ನನ್ನು ಪತ್ತೆಹಚ್ಚಿ, ಮೇ 2, 2011ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿತ್ತು.



















