ನವದೆಹಲಿ: ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ತಾರಾ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ತಪ್ಪಿಗೆ, ಆಸ್ಟ್ರೇಲಿಯಾದ ಯುವ ವೇಗದ ಬೌಲರ್ ಕ್ಸೇವಿಯರ್ ಬಾರ್ಟ್ಲೆಟ್ (Xavier Bartlett) ಅವರು ಕೊಹ್ಲಿಯ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೊಹ್ಲಿ ವಿಕೆಟ್ ಪಡೆದ ನಂತರ, ಬಾರ್ಟ್ಲೆಟ್‌ರ ಇನ್‌ಸ್ಟಾಗ್ರಾಮ್ ಖಾತೆಗೆ ನುಗ್ಗಿದ ಸಾವಿರಾರು ಅಭಿಮಾನಿಗಳು, ನಿಂದನೀಯ ಮತ್ತು ಅಸಭ್ಯ ಕಾಮೆಂಟ್‌ಗಳನ್ನು ಹಾಕಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ, 26 ವರ್ಷದ ಬಾರ್ಟ್ಲೆಟ್, ಕೊಹ್ಲಿಯನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದ್ದರು. ಇದು ಈ ಸರಣಿಯಲ್ಲಿ ಕೊಹ್ಲಿಯ ಸತತ ಎರಡನೇ ‘ಡಕ್ ಔಟ್’ ಆಗಿತ್ತು. ತಮ್ಮ ಸುದೀರ್ಘ ಏಕದಿನ ವೃತ್ತಿಜೀವನದಲ್ಲಿ ಕೊಹ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದು ಇದೇ ಮೊದಲು. ಈ ಪಂದ್ಯವನ್ನು ಆಸ್ಟ್ರೇಲಿಯಾ ಎರಡು ವಿಕೆಟ್‌ಗಳಿಂದ ರೋಚಕವಾಗಿ ಗೆದ್ದು ಸರಣಿಯನ್ನು ಕೈವಶ ಮಾಡಿಕೊಂಡಿತು. ಆದರೆ, ಬಾರ್ಟ್ಲೆಟ್ ಪಡೆದ ಈ ಅಮೂಲ್ಯ ವಿಕೆಟ್, ಆನ್‌ಲೈನ್‌ನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಬಾರ್ಟ್ಲೆಟ್ ಇನ್‌ಸ್ಟಾಗ್ರಾಮ್ ಮೇಲೆ ದಾಳಿ
ಆಗಸ್ಟ್ 1ರಿಂದ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಪೋಸ್ಟ್ ಹಾಕದಿದ್ದ ಬಾರ್ಟ್ಲೆಟ್, ಈ ಹಿಂದೆ ಐಪಿಎಲ್ ಸಮಯದಲ್ಲಿ ಕೊಹ್ಲಿ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಅದೇ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ 4,400ಕ್ಕೂ ಹೆಚ್ಚು ನಿಂದನೀಯ ಕಾಮೆಂಟ್‌ಗಳು ತುಂಬಿಹೋಗಿವೆ. ಅನೇಕರು ಕೊಹ್ಲಿಯನ್ನು ಬಾರ್ಟ್ಲೆಟ್‌ನ “ತಂದೆ” ಎಂದು ಅಣಕಿಸಿ, ಅಸಭ್ಯವಾಗಿ ನಿಂದಿಸಿದ್ದಾರೆ. ಪೆವಿಲಿಯನ್‌ಗೆ ಹಿಂದಿರುಗುವಾಗ ಕೊಹ್ಲಿ ಪ್ರೇಕ್ಷಕರಿಗೆ ಕೈಬೀಸಿದ್ದು, ಇದು ಅವರ ನಿವೃತ್ತಿಯ ಸಂಕೇತವಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದ್ದು, ಇದು ಅಭಿಮಾನಿಗಳ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿಯನ್ನು ಔಟ್ ಮಾಡಿದ್ದ ಮಿಚೆಲ್ ಸ್ಟಾರ್ಕ್ ಕೂಡ ಇದೇ ರೀತಿಯ ಆನ್‌ಲೈನ್ ನಿಂದನೆಯನ್ನು ಎದುರಿಸಿದ್ದರು. ಈ ಘಟನೆಯನ್ನು ಕ್ರಿಕೆಟ್ ಸಮುದಾಯವು ತೀವ್ರವಾಗಿ ಖಂಡಿಸಿದ್ದು, ಇಂತಹ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
“ಕೊಹ್ಲಿ ವಿಕೆಟ್ ಪಡೆದಿದ್ದು ನನ್ನ ಅದೃಷ್ಟ”: ಬಾರ್ಟ್ಲೆಟ್
ಈ ಎಲ್ಲಾ ವಿವಾದಗಳ ನಡುವೆಯೂ, ಪಂದ್ಯದ ನಂತರ ಮಾತನಾಡಿದ ಬಾರ್ಟ್ಲೆಟ್, ಕೊಹ್ಲಿ ಬಗ್ಗೆ ಅತ್ಯಂತ ಗೌರವದಿಂದ ಪ್ರತಿಕ್ರಿಯಿಸಿದ್ದಾರೆ. “ಅವರು ಸಾರ್ವಕಾಲಿಕ ಶ್ರೇಷ್ಠ ವೈಟ್-ಬಾಲ್ ಆಟಗಾರರಲ್ಲಿ ಒಬ್ಬರು. ಅವರನ್ನು ಔಟ್ ಮಾಡಿದ್ದು ನನ್ನ ಅದೃಷ್ಟ. ನಾನು ಔಟ್‌ಸ್ವಿಂಗರ್ ಹಾಕಲು ಯತ್ನಿಸಿದೆ, ಆದರೆ ಅದು ಸ್ವಲ್ಪ ಒಳಗೆ ನುಗ್ಗಿತು. ಅದೃಷ್ಟವಶಾತ್ ವಿಕೆಟ್ ಸಿಕ್ಕಿತು,” ಎಂದು ಅವರು ‘ಫಾಕ್ಸ್ ಕ್ರಿಕೆಟ್’ ಜೊತೆ ವಿನಮ್ರವಾಗಿ ಹೇಳಿದ್ದಾರೆ.



















