ಬೆಂಗಳೂರು : ವೈದ್ಯೆ ಡಾ. ಕೃತಿಕಾ ರೆಡ್ಡಿ ಅವರದ್ದು ಸಹಜ ಸಾವಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂಬ ಸತ್ಯ ಇದೀಗ ಬಯಲಾಗಿದೆ. ಆರೋಪಿ, ಪತಿ ಡಾ.ಮಹೇಂದ್ರರೆಡ್ಡಿ ಪೊಲೀಸರ ಮುಂದೆ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ. ಇದರ ಜೊತೆಗೆ ತನಿಖೆ ವೇಳೆ ಕೆಲ ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ.

ಯೆಸ್.. ಕೊಲೆ ಹಿಂದಿನ ಕಾರಣ ಮತ್ತು ಅದಕ್ಕಾಗಿ ಆರೋಪಿಯ ಪ್ಲ್ಯಾನ್ ಹೇಗಿತ್ತು ಎಂಬುದನ್ನೀಗ ಪೊಲೀಸರು ಬಹಿರಂಗಗೊಳಿಸಿದ್ದಾರೆ. ಡಾ. ಕೃತಿಕಾ ರೆಡ್ಡಿಯದ್ದು ಸಹಜ ಸಾವು ಎಂದು ಬಿಂಬಿಸದರೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ. ಹೀಗಾಗಿ ಸಾವಿಗೆ ಅಸಲಿ ಕಾರಣ ಏನೆಂಬುದು ಗೊತ್ತಾಗಲ್ಲ ಎಂಬುದು ಡಾ. ಮಹೇಂದ್ರ ರೆಡ್ಡಿಯ ಪ್ಲ್ಯಾನ್ ಆಗಿತ್ತು.
ಕೊಲೆ ಮಾಡಿದ್ದು ಹೇಗೆ?
ಡಾ. ಕೃತಿಕಾ ರೆಡ್ಡಿಗಿದ್ದ ಆರೋಗ್ಯ ಸಮಸ್ಯೆಯಿಂದ ಪತಿ ಡಾ. ಮಹೇಂದ್ರರೆಡ್ಡಿ ಬೇಸತ್ತಿದ್ದ. ತನಗೆ ವೈಯಕ್ತಿಕ ಜೀವನ ಇಲ್ಲ ಎಂದು ಕೋಪಕೊಂಡಿದ್ದ. ಹೀಗಂತಾ ವಿಚ್ಛೇದನ ಪಡೆದರೆ ತನಗೆ ಏನು ಸಿಗಲ್ಲ ಎಂಬುದು ಆರೋಪಿಗೆ ಗೊತ್ತಿತ್ತು. ಹಾಗಾಗಿ ಹೆಂಡತಿಯ ಆರೋಗ್ಯ ಸಮಸ್ಯೆಯನ್ನೇ ಬಂಡವಾಳವಾಗಿ ಮಾಡಿಕೊಂಡು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯೋಜನೆ ಸಿದ್ಧಪಡಿಸಿದ್ದ. ಇದರ ಭಾಗವಾಗಿ ಡಾ.ಕೃತಿಕಾಗೆ ಅನಸ್ತೇಶಿಯಾ ಕೊಟ್ಟಿದ್ದ. ಆಕೆಯ ದೇಹದ ತೂಕಕ್ಕೆ ಕೇವಲ ಏಳರಿಂದ ಎಂಟು ಎಂ.ಎಲ್. ಅನಸ್ತೇಶಿಯಾ ನೀಡಬಹುದಾಗಿತ್ತು. ಇದು ಗೊತ್ತಿದ್ದರೂ ಆ ದಿನ ಹದಿನೈದು ಎಂ.ಎಲ್. ನೀಡಿದ್ದ ಎಂಬುದು ವೈಜ್ಞಾನಿಕ ಸಾಕ್ಷಿಗಳಿಂದ ದೃಢಪಟ್ಟಿವೆ.
ಇನ್ನು, ಪ್ರಕರಣ ಸಂಬಂಧ ಬಂಧಿತ ಆರೋಪಿ ಡಾ.ಮಹೇಂದ್ರರೆಡ್ಡಿಯ ಮೊಬೈಲ್ ನ ಡಾಟಾ ಕೂಡ ಪೊಲೀಸರು ರಿಟ್ರೀವ್ ಮಾಡಿದ್ದು, ಈ ವೇಳೆ ಹಲವು ಮಹತ್ವದ ಸಾಕ್ಷಿಗಳು ದೊರೆತಿವೆ. I have killed Kruthika ಎಂದು ಆರೋಪಿ ಸಂದೇಶ ಕಳುಹಿಸಿದ್ದ ಬಗ್ಗೆ ಗೊತ್ತಾಗಿದೆ.
ಹೆಂಡತಿ ಸಾಯಬೇಕು, ಆದರೆ ತಾನು ಕೆಟ್ಟವನಾಗಬಾರದು. ಆಸ್ತಿಯೂ ಕೈತಪ್ಪಿ ಹೋಗಬಾರದು ಎಂಬುದು ಆರೋಪಿಯ ಪ್ಲ್ಯಾನ್ ಆಗಿತ್ತು. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡೇ ಡಾ.ಮಹೇಂದ್ರ ರೆಡ್ಡಿ ಕೃತ್ಯ ಎಸಗಿದ್ದ ಎಂಬುದು ಗೊತ್ತಾಗಿದೆ. ಇದರ ಜೊತೆಗೆ ಫ್ರೋಫಾಪಾಲ್ ಖರೀದಿ ಮಾಡಿದ್ದಕ್ಕೆ ಸಾಕ್ಷಿ, ಇಂಜೆಕ್ಷನ್ ಕೊಟ್ಟಿದ್ದಕ್ಕೆ ಕ್ಯಾನ್ ಮತ್ತು ಮೃತ ದೇಹದಲ್ಲಿ ಅರವಳಿಕೆ ಅಂಶ ಪತ್ತೆ ಸೇರಿ ಕೊಲೆ ಮಾಡಿರುವ ಬಗ್ಗೆ ಓರ್ವರ ಜೊತೆ ಚಾಟ್ ಮಾಡಿರುವ ಸಂಗತಿಯನ್ನು ಪೊಲೀಸರು ಬಟಾಬಯಲು ಮಾಡಿದ್ದಾರೆ.


















