ಬೆಂಗಳೂರು : ಬೆಂಗಳೂರು ರಸ್ತೆಗಳ ಬಗ್ಗೆ ದಿನಕ್ಕೊಂದು ಪೋಸ್ಟ್, ಟ್ರೋಲ್, ಮೀಮ್ಸ್, ಅದರಲ್ಲೂ ಸರ್ಕಾರದ ವಿರುದ್ಧ ಸಾರ್ವಜನಿಕರು ಮಾಡುತ್ತಿದ್ದ ಆರೋಪ, ಇದರ ಜತೆಗೆ ವಿದೇಶಿಗರು, ಉದ್ಯಮಿಗಳು ಮಾಡಿದ ಪೋಸ್ಟ್ ನೋಡಿ ಇದೀಗ ಜಿಬಿಎ ಮುಖ್ಯ ಆಯುಕ್ತರಿಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಸೂಚನೆಯನ್ನು ನೀಡಿದ್ದಾರೆ.
ಒಂದು ವಾರದೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ಸೂಚನೆ ನೀಡಿದ್ದಾರೆ. ರಸ್ತೆಗಳ ಸ್ಥಿತಿಯನ್ನು ಸುಧಾರಿಸಲು ಹೊಸ ಟಾರ್ ಹಾಕುವಂತೆಯೂ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.
ನಿನ್ನೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಸೇರಿದಂತೆ ರಸ್ತೆಗಳ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಳೆಯಿಂದಾಗಿ ಗುಂಡಿಗಳನ್ನು ಮುಚ್ಚುವಲ್ಲಿ ವಿಳಂಬವಾಗಿದೆ. ನಾನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಒಂದು ವಾರದೊಳಗೆ ಗುಂಡಿಗಳನ್ನು ಮುಚ್ಚಬೇಕೆಂದು ಸೂಚಿಸಿದ್ದೇನೆ ಎಂದು ಹೇಳಿದದ್ದಾರೆ.