ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ಸಂಭ್ರಮದ ವೇಳೆ ಬೆಂಗಳೂರಿನಲ್ಲಿ ಮಕ್ಕಳು ಸೇರಿದಂತೆ 90ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಗಾಯಗಳಾಗಿ ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ ಸಿಡಿಸುವವರಿಗಿಂತ ನೋಡುತ್ತಾ ನಿಂತವರು ಮತ್ತು ದಾರಿ ಹೋಕರೆ ಪಟಾಕಿಯಿಂದ ಹೆಚ್ಚು ಗಾಯಗೊಂಡಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 51 ಜನರಿಗೆ ಚಿಕಿತ್ಸೆ ನೀಡಲಾಗಿದ್ದು, ಅದರಲ್ಲಿ 27 ಮಕ್ಕಳಿದ್ದಾರೆ. ಆರು ಜನರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಉಳಿದವರು ಹೊರ ರೋಗಿಗಳಾಗಿ ಮತ್ತು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 51 ಜನರಲ್ಲಿ 38 ಜನರು ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದಾರೆ. ಉಳಿದವರು ಬೇರೆಯವರು ಸಿಡಿಸಿದ ಪಟಾಕಿ ಕಿಡಿ ಸಿಡಿದು ಗಾಯಗೊಂಡಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 13 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 13 ಪ್ರಕರಣ ದಾಖಲಾಗಿದ್ರೆ, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 6 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು. ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಮೂವರು ಟ್ರೀಟ್‌ಮೆಂಟ್ ಪಡೆದಿದ್ದಾರೆ.
ನಗರದಲ್ಲಿ ಒಟ್ಟು ಪಟಾಕಿ ಸಿಡಿತದಿಂದ 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕೆಲವರು ಕಣ್ಣನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಪಟಾಕಿ ಸಿಡಿತದಿಂದ 20 ವರ್ಷದ ಯುವಕ ಶಾಶ್ವತ ದೃಷ್ಠಿ ಸಮಸ್ಯೆಗೆ ತುತ್ತಾಗಿದ್ದಾನೆ. ಪಟಾಕಿ ಸಿಡಿದು ಕಣ್ಣಿನ ದೃಷ್ಠಿ ಸಂಪೂರ್ಣ ಹಾನಿ ಆಗಿದೆ. ಬಿಹಾರ ಮೂಲದ ಯುವಕ ಬೆಂಗಳೂರಿನ ಅಕ್ಕಿಪೇಟೆಯಲ್ಲಿ ವಾಸವಾಗಿದ್ದು, ಇಡೀ ಕುಟುಂಬ ಈತನ ದುಡಿಮೆ ಮೇಲೆ ಅವಲಂಬನೆ ಆಗಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗ್ತಿದೆ.