ಹಾಸನ : ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವ ಅಂತಿಮ ಘಟ್ಟ ತಲುಪಿದ್ದು, ಅಮ್ಮನ ದರ್ಶನಕ್ಕೆ ಇಂದೇ ಕೊನೆ ದಿನವಾಗಿದೆ. ಅ.23ರಂದು ಮಧ್ಯಾಹ್ನ ದೇಗುಲದ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಕಳೆದ 13 ದಿನದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಮಾಡಿದ್ದು, ಈವರೆಗೆ ಆದಾಯ ಗಳಿಕೆ 25 ಕೋಟಿ ಸಮೀಪಕ್ಕೆ ತಲುಪಿದೆ.
ವರ್ಷಗಳು ಕಳೆದಂತೆ ಹಾಸನಾಂಬೆ ದೇವಿಗೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದೇವಸ್ಥಾನದ ಆದಾಯವೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಲೇ ಇದೆ. ಕಳೆದ ವರ್ಷ 12.5 ಕೋಟಿ ಆಸುಪಾಸಿನಲ್ಲಿದ್ದ ಆದಾಯ ಈ ಬಾರಿ 25 ಕೋಟಿ ತಲುಪುವ ಸಾಧ್ಯತೆ ಇದೆ. ಈವರೆಗೂ ಹಾಸನಾಂಬೆ ದೇವಸ್ಥಾನಕ್ಕೆ 1,000, 300 ರೂಪಾಯಿ ಟಿಕೆಟ್ ಸಾಲಿನಲ್ಲಿ 3,40,260 ಜನರಿಂದ ದರ್ಶನ ಪಡೆದಿದ್ದಾರೆ. ಟಿಕೆಟ್ ಹಾಗೂ ಲಾಡು ಪ್ರಸಾದದಿಂದ ದೇಗುಲಕ್ಕೆ ಒಟ್ಟು 23 ಕೋಟಿ ರೂಪಾಯಿ ಆದಾಯ ಹರಿದುಬಂದಿದೆ.
ಹಾಸನಾಂಬೆ ದರ್ಶನಕ್ಕೆ ಇವತ್ತು ಕೊನೆಯ ದಿನವಾಗಿದ್ದು, ರಾತ್ರಿ 8 ಗಂಟೆಗೆ ಸಾರ್ವಜನಿಕರಿಗೆ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಕೊನೆಯ ದಿನ ದೇವಿ ಕಣ್ತುಂಬಿಕೊಳ್ತಿರೋ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರಲಿದ್ದಾರೆ ಅಂತ ಅಂದಾಜಿಸಲಾಗಿದೆ.
ದೇವಿಯ ದರ್ಶನಕ್ಕೆ ಇವತ್ತು ಕೊನೆಯ ದಿನ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ. ಇಂದು ಮಾತ್ರ ಸಾರ್ವಜನಿಕರಿಂದ ದೇವಿ ದರ್ಶನಕ್ಕೆ ಅವಕಾಶ ಇದ್ದು, ಸಂಜೆ 8ಕ್ಕೆ ಸಾರ್ವಜನಿಕ ದರ್ಶನಕ್ಕೆ ಅದ್ಧೂರಿ ತೆರೆ ಬೀಳಲಿದೆ. ನಾಳೆ, ದೇವಸ್ಥಾನದ ಬಾಗಿಲು ಮುಚ್ಚಲಿದ್ದು, ಬರೋ ವರ್ಷ ಮತ್ತೆ ದೇವಿ ದರ್ಶನ ನೀಡಲಿದ್ದಾಳೆ.