ಬೆಂಗಳೂರು: ನ. 2 ರಂದು ಚಿತ್ತಾಪುರದಲ್ಲಿಆರ್‌ಎಸ್‌ಎಸ್ ಪಥ ಸಂಚಲನ ನಡದೇ ನಡೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಪ್ರಿಯಾಂಕ್ ಖರ್ಗೆಗೆ ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡುವ ದುರ್ಬುದ್ಧಿ ಯಾಕೆ ಬಂದಿದೆಯೋ ಗೊತ್ತಿಲ್ಲ.ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುತ್ತಿರುವುದು ಪ್ರಚಾರಕ್ಕೋ ಅಥವಾ ಸಿಎಂ ಕುರ್ಚಿಗೆ ಟವಲ್ ಹಾಕುವುದಕ್ಕೊ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಹೇಳಿದ ಹಾಗೆ ಪ್ರಿಯಾಂಕ್ ಖರ್ಗೆ ಏಕಾಂಗಿ ಆಗಿದ್ದಾರೆ. ಗಾಂಧಿ ಕುಟುಂಬದಿಂದಲೇ ಆರ್‌ಎಸ್‌ಎಸ್ ಮಣಿಸುವುದಕ್ಕೆ ಆಗಲಿಲ್ಲ. ಇಂತಹ ಹೇಳಿಕೆ ನಿತ್ಯ ಕೊಡುವ ಮೂಲಕ ವಾಸ್ತವಿಕ ಸತ್ಯ ಮರೆ ಮಾಚುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಆಡಳಿತ ಪಕ್ಷದ ವೈಫಲ್ಯ ಮುಚ್ಚಿಕೊಳ್ಳುವುದಕ್ಕೆ ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚಿತ್ತಾಪುರದಲ್ಲಿ ನ.2ರಂದುಆರ್‌ಎಸ್‌ಎಸ್ ಪಥ ಸಂಚಲನ ನಡೆದೇ ನಡೆಯುತ್ತೆ. ಹೈಕೋರ್ಟ್ ಕೂಡ ಹೇಳಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಪಥ ಸಂಚಲನ ಆಗುತ್ತದೆ. ಹಾಗೇ ಚಿತ್ತಾಪುರದಲ್ಲಿ ನಡೆಯುತ್ತದೆ. ಪ್ರಿಯಾಂಗ್ ಖರ್ಗೆ ಹೀಗೆ ಟೀಕೆ ಮಾಡಿ ಆರ್‌ಎಸ್‌ಎಸ್ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಆರ್‌ಎಸ್‌ಎಸ್ ಇಂತಹ ಅನೇಕ ಅಗ್ನಿ ಪರೀಕ್ಷೆ ಎದುರಿಸಿದೆ. ಆರ್‌ಎಸ್‌ಎಸ್ ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡದೇ ಸಮಾಜ ಸೇವೆ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಿಯಾಂಕ್ ವಿರುದ್ಧ ವಾಗ್ದಾಳಿ
ಬಿಜೆಪಿ ಅವರು ಸೀಳು ನಾಯಿಗಳು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಪ್ರಿಯಾಂಕ್ ಖರ್ಗೆ ಅವರ ಅಪ್ರಬುದ್ಧ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಪ್ರಿಯಾಂಕ್ ಖರ್ಗೆ ಅವರೇ ಕೆಲಸಕ್ಕೆ ಬಾರದ್ದನ್ನು ಮಾತನಾಡುವುದು ಬಿಡಿ. ನಿಮ್ಮ ಕುಟುಂಬ 40-50 ವರ್ಷಗಳ ಕಾಲ ರಾಜಕೀಯದಲ್ಲಿ ಹಿಡಿತ ಇಟ್ಟುಕೊಂಡು ಬಂದಿದೆ. ನಿಮ್ಮ ಅಧಿಕಾರದಲ್ಲಿ ಕಲಬುರಗಿ ಏನಾಗಿದೆ ಮೊದಲು ಹೇಳಿ? ಶಿಕ್ಷಣದಲ್ಲಿ ಎಷ್ಟನೇ ಸ್ಥಾನದಲ್ಲಿ ಇದೆ ಮೊದಲು ಹೇಳಿ? ಅವರ ಜಿಲ್ಲೆ ಏನ್ ಅಭಿವೃದ್ಧಿ ಆಗಿದೆ ಎಂದು ಮೊದಲು ಪ್ರಿಯಾಂಕ್ ಖರ್ಗೆ ನೋಡಲಿ. ಬಿಜೆಪಿ ಅವಧಿಯಲ್ಲಿ ಕಲಬುರ್ಗಿಗೆ ಎಷ್ಟು ಹಣ ಬಿಡುಗಡೆ ಆಗಿತ್ತು. ಕಾಂಗ್ರೆಸ್ ಅವಧಿಯಲ್ಲಿ ಎಷ್ಟು ಹಣ ಕೊಟ್ಟಿದ್ದಾರೆ? ಮೊದಲು ಪ್ರಿಯಾಂಕ್ ಖರ್ಗೆ ಹೇಳಲಿ ಎಂದು ಪ್ರಿಯಾಂಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.