ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಮಹಾಮೈತ್ರಿ’ಕೂಟದೊಳಗಿನ ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ವಿಚಿತ್ರ ಪರಿಸ್ಥಿತಿಗೆ ಕಾರಣವಾಗಿದ್ದು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ತಮ್ಮದೇ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ವಿರುದ್ಧ ಪ್ರಚಾರ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಸನ್ನಿವೇಶ ದರ್ಭಂಗಾ ಜಿಲ್ಲೆಯ ಗೌರಾ ಬೌರಾಮ್ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ.
‘ಮಹಾಮೈತ್ರಿ’ಕೂಟದ ಪಾಲುದಾರರ ನಡುವೆ ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಳ್ಳದ ಕಾರಣ, ಬಿಹಾರದ ಹಲವು ಕ್ಷೇತ್ರಗಳಲ್ಲಿ ‘ಸ್ನೇಹಪೂರ್ವಕ ಸ್ಪರ್ಧೆ’ ಏರ್ಪಟ್ಟಿದೆ. ಇದರಲ್ಲಿ ಮಿತ್ರಪಕ್ಷಗಳೇ ಪರಸ್ಪರ ಎದುರಾಳಿಗಳಾಗಿವೆ. ಆದರೆ, ಗೌರಾ ಬೌರಾಮ್ ಕ್ಷೇತ್ರದ ಕಥೆಯೇ ಬೇರೆ.
ಏನು ಇಲ್ಲಿಯ ಕಥೆ?
ಸೀಟು ಹಂಚಿಕೆ ಅಂತಿಮಗೊಳ್ಳುವ ಮುನ್ನ, ಆರ್‌ಜೆಡಿ ತನ್ನ ನಾಯಕ ಅಫ್ಜಲ್ ಅಲಿ ಖಾನ್ ಅವರನ್ನು ಗೌರಾ ಬೌರಾಮ್ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿತ್ತು. ಪಕ್ಷದ ನಾಯಕತ್ವವು ಅಫ್ಜಲ್ ಅವರಿಗೆ ಪಕ್ಷದ ಚಿಹ್ನೆ ಮತ್ತು ಅಧಿಕೃತ ದಾಖಲೆಗಳನ್ನೂ ನೀಡಿತ್ತು. ಇದರಿಂದ ಉತ್ಸುಕರಾದ ಅಫ್ಜಲ್, ಪಾಟ್ನಾದಿಂದ ತಮ್ಮ ಕ್ಷೇತ್ರಕ್ಕೆ ತೆರಳಿ ಪ್ರಚಾರ ಆರಂಭಿಸಲು ಸಿದ್ಧತೆ ನಡೆಸಿದ್ದರು.
ಆದರೆ, ಅವರು ತಮ್ಮ ಕ್ಷೇತ್ರ ತಲುಪುವಷ್ಟರಲ್ಲಿ, ಆರ್‌ಜೆಡಿ ಮತ್ತು ಮುಖೇಶ್ ಸಹಾನಿ ಅವರ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ನಡುವೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿತು. ಈ ಒಪ್ಪಂದದ ಪ್ರಕಾರ, ಗೌರಾ ಬೌರಾಮ್ ಕ್ಷೇತ್ರವನ್ನು ವಿಐಪಿಗೆ ಬಿಟ್ಟುಕೊಡಲು ನಿರ್ಧರಿಸಲಾಯಿತು ಮತ್ತು ಮಹಾಮೈತ್ರಿಕೂಟದ ಎಲ್ಲಾ ಪಕ್ಷಗಳು ವಿಐಪಿ ಅಭ್ಯರ್ಥಿ ಸಂತೋಷ್ ಸಹಾನಿ ಅವರನ್ನು ಬೆಂಬಲಿಸಲು ನಿರ್ಧರಿಸಿದರು.
ಆರ್‌ಜೆಡಿ ನಾಯಕತ್ವವು ಅಫ್ಜಲ್ ಅಲಿ ಖಾನ್ ಅವರನ್ನು ಸಂಪರ್ಕಿಸಿ, ಪಕ್ಷದ ಚಿಹ್ನೆಯನ್ನು ಹಿಂದಿರುಗಿಸಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿತು. ಆದರೆ, ಅಫ್ಜಲ್ ಇದಕ್ಕೆ ನಿರಾಕರಿಸಿ, ಆರ್‌ಜೆಡಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ತಮ್ಮ ಪಕ್ಷವು ಅಫ್ಜಲ್ ಅವರ ಉಮೇದುವಾರಿಕೆಯನ್ನು ಅನುಮೋದಿಸಿಲ್ಲ ಎಂದು ಆರ್‌ಜೆಡಿ ಚುನಾವಣಾ ಅಧಿಕಾರಿಗಳಿಗೆ ತಿಳಿಸಿತಾದರೂ, ಅಫ್ಜಲ್ ಅವರು ಸರಿಯಾದ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಿರುವುದರಿಂದ ಅವರನ್ನು ಸ್ಪರ್ಧೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಹೀಗಾಗಿ, ಇದೀಗ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಅಫ್ಜಲ್ ಅಲಿ ಖಾನ್ ಅವರ ಹೆಸರಿನ ಮುಂದೆ ಆರ್‌ಜೆಡಿಯ ಚಿಹ್ನೆ ಇರಲಿದೆ. ಆದರೆ, ತೇಜಸ್ವಿ ಯಾದವ್ ಸೇರಿದಂತೆ ‘ಮಹಾಮೈತ್ರಿ’ಕೂಟದ ನಾಯಕರು ವಿಐಪಿ ಅಭ್ಯರ್ಥಿ ಸಂತೋಷ್ ಸಹಾನಿ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಈ ಗೊಂದಲವು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಸ್ಥಾನದ ಬನ್ಸ್ವಾರಾದಲ್ಲೂ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿತ್ತು. ಅಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ನಂತರ, ಮಿತ್ರಪಕ್ಷವಾದ ಭಾರತ್ ಆದಿವಾಸಿ ಪಾರ್ಟಿಯ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿತ್ತು.
2020ರ ಬಿಹಾರ ಚುನಾವಣೆಯಲ್ಲಿ ಗೌರಾ ಬೌರಾಮ್ ಕ್ಷೇತ್ರವನ್ನು ವಿಐಪಿ ಪಕ್ಷದ ಸ್ವರ್ಣಾ ಸಿಂಗ್ ಗೆದ್ದಿದ್ದರು, ಆದರೆ ನಂತರ ಅವರು ಬಿಜೆಪಿಗೆ ಸೇರಿದರು. 2010 ಮತ್ತು 2015ರ ಚುನಾವಣೆಗಳಲ್ಲಿ ಈ ಕ್ಷೇತ್ರವನ್ನು ಜೆಡಿಯು ಗೆದ್ದಿತ್ತು.