ಮೈಸೂರು : ಮೈಸೂರಲ್ಲಿ ದೀಪಾವಳಿ ಸಂಭ್ರಮದ ನಡುವೆ ಘೋರ ದುರಂತ ಸಂಭವಿಸಿದ್ದು, ಕಾಲುವೆಗೆ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ. ಚಾಮರಾಜ ಎಡದಂಡೆ ಕಾಲುವೆಯಲ್ಲಿ ಈಜಾಡಲು ಹೋದವರು ಜಲಸಮಾಧಿಯಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬನ ಮೃತದೇಹಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಅಯಾನ್ ಹಾಗೂ ಆಜಾನ್ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ಓದುತ್ತಿದ್ದು, ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಗ್ರಾಮಕ್ಕೆ ಬಂದಿದ್ದರು. ಆದ್ರೆ, ಇಂದು (ಅಕ್ಟೋಬರ್ 20) ಈಜಾಡಲೆಂದು ಚಾಮರಾಜ ಎಡದಂಡೆ ಕಾಲುವೆಗೆ ತೆರಳಿದ್ದಾರೆ. ಆದ್ರೆ, ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ಹುಡುಕಾಟ ನಡೆಸಿದಾಗ ಕಾಲುವೆ ಬಳಿ ಮಕ್ಕಳ ಬಟ್ಟೆ ಹಾಗೂ ಚಪ್ಪಲಿಗಳು ಪತ್ತೆಯಾಗಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಸಾಲಿಗ್ರಾಮ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಶೋಧ ಕಾರ್ಯ ನಡೆಸಿದ್ದು, ಸದ್ಯ ಇಬ್ಬರ ಮೃತದೇಹಗಳು ಕಾಲುವೆಯಲ್ಲಿ ಪತ್ತೆಯಾಗಿವೆ.