ಹಾವೇರಿ: ತಾಯಿ ಹಾಗೂ ಮಗಳು ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ವರದಾಹಳ್ಳಿ ಗ್ರಾಮದ ಬಳಿ ನಡೆದಿದೆ. ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಹಾಗೂ ಮಗಳು ಕಾವ್ಯಾ (12) ಸಾವನ್ನಪ್ಪಿದ್ದಾರೆ.
ಗಂಡನ ಮನೆಯಲ್ಲಿ ದಿನನಿತ್ಯ ಭಿನ್ನಾಭಿಪ್ರಾಯ ಹಾಗೂ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೋಣಿ ಮೂಲಕ ನದಿಯಲ್ಲಿ ಹುಡುಕಾಟ ಪ್ರಾರಂಭಿಸಿದ್ದರು. ಇದೀಗ ಕಾವ್ಯಾ ಅವರ ಮೃತದೇಹ ಪತ್ತೆಯಾಗಿದ್ದು, ಸವಿತಾ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸವಿತಾ ಅವರಿಗೆ ಇಬ್ಬರು ಗಂಡು, ಓರ್ವ ಹೆಣ್ಣು ಮಗಳಿದ್ದಾಳೆ. ಇತ್ತೀಚೆಗಷ್ಟೇ ಮಗಳು ಕಾವ್ಯಾ ನವೋದಯ ಪರೀಕ್ಷೆ ಪಾಸಾಗಿದ್ದಳು. ಪ್ರತಿಭಾವಂತೆಯಾಗಿದ್ದಳು. ಆದರೆ, ಮನೆಯಲ್ಲಿ ನಿತ್ಯ ಕಲಹ, ಭಿನ್ನಾಭಿಪ್ರಾಯವಿದ್ದ ಹಿನ್ನೆಲೆಯಲ್ಲಿ ಮನನೊಂದು ತಾಯಿ ಸವಿತಾ ಅವರು ಕಾವ್ಯಾಳನ್ನು ಕರೆದುಕೊಂಡು ಬಂದು ನದಿಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.