ಬೆಂಗಳೂರು: ದೇಶದ ಕೋಟ್ಯಂತರ ಜನರ ವಿಶ್ವಾಸ ಗಳಿಸಿರುವ ಸಾರ್ವಜನಿಕ ವಲಯದ ಭಾರತೀಯ ಜೀವ ವಿಮಾ ನಿಗಮವು (LIC) ಎರಡು ಹೊಸ ಪಾಲಿಸಿಗಳನ್ನು ಪರಿಚಯಿಸಿದೆ. ಜನ ಸುರಕ್ಷಾ ಪ್ಲಾನ್ ಹಾಗೂ ಬಿಮಾ ಲಕ್ಷ್ಮೀ ಎಂಬ ಎರಡು ಹೊಸ ಪಾಲಿಸಿಗಳಿಗೆ ಚಾಲನೆ ನೀಡಿದೆ. ಅದರಲ್ಲೂ, ಬಿಮಾ ಲಕ್ಷ್ಮೀ ಪಾಲಿಸಿಯು ಸಂಪೂರ್ಣವಾಗಿ ಮಹಿಳೆಯರಿಗೆ ಸೀಮಿತವಾಗಿದೆ. ಹಾಗಾದರೆ, ಪಾಲಿಸಿಯ ಉಪಯೋಗಗಳು ಏನು? ಇಲ್ಲಿದೆ ಮಾಹಿತಿ.
“ಎಲ್ಐಸಿ ಜನ ಸುರಕ್ಷಾ ಯೋಜನೆಯ ಮಾಹಿತಿ”
ಎಲ್ಐಸಿ ಜನ ಸುರಕ್ಷಾ ಯೋಜನೆಯು ಮೈಕ್ರೋ ಇನ್ಶೂರೆನ್ಸ್ ಯೋಜನೆಯಾಗಿದೆ. ವಿಶೇಷವಾಗಿ ಕಡಿಮೆ ಆದಾಯ ಇರುವವರಿಗಾಗಿ ಇದನ್ನು ರೂಪಿಸಲಾಗಿದೆ. ಇದು ಮಾರುಕಟ್ಟೆ ಅಥವಾ ಕಂಪನಿಯ ಲಾಭ ಅಥವಾ ಬೋನಸ್ ಗೆ ಸಂಬಂಧಿಸಿದ ಯೋಜನೆಯಲ್ಲ. ಕಡಿಮೆ ಪ್ರೀಮಿಯಂ ಮತ್ತು ಅನುಕೂಲಕರ ಪಾವತಿ ಆಯ್ಕೆಗಳ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ರಕ್ಷಣೆ ನೀಡುವ ದೃಷ್ಟಿಯಿಂದ ಜಾರಿಗೊಳಿಸಲಾಗಿದೆ.
18-55 ವರ್ಷ ವಯಸ್ಸಿನ ಯಾರು ಬೇಕಾದರೂ ಪಾಲಿಸಿ ಖರೀದಿಸಬಹುದು. ಪಾಲಿಸಿಯ ಅವಧಿ 12-20 ವರ್ಷವಾಗಿರುತ್ತದೆ. ಕನಿಷ್ಠ ವಿಮಾ ಮೊತ್ತ 1 ಲಕ್ಷ ರೂಪಾಯಿ ಇದ್ದರೆ ಗರಿಷ್ಠ ವಿಮಾ ಮೊತ್ತ 2 ಲಕ್ಷ ರೂಪಾಯಿವರೆಗೆ ಇದೆ. ಪಾಲಿಸಿ ಅವಧಿಯನ್ನು 12-20 ವರ್ಷಗಳ ನಡುವೆ ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿದ ಪಾಲಿಸಿಯ ಅವಧಿಯನ್ನು ಅವಲಂಬಿಸಿ, ಪ್ರೀಮಿಯಂ ಪಾವತಿಯು ಐದು ವರ್ಷಗಳವರೆಗೆ ಇರುತ್ತದೆ. ಅಂದರೆ ನೀವು 12 ವರ್ಷಗಳನ್ನು ಆರಿಸಿದರೆ, 7 ವರ್ಷಗಳವರೆಗೆ ಪ್ರೀಮಿಯಂ ಕಟ್ಟಬೇಕಿರುತ್ತದೆ. ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಪ್ರೀಮಿಯಂ ಪಾವತಿಸಬಹುದು.
“ಬಿಮಾ ಲಕ್ಷ್ಮೀ ಯೋಜನೆ ಕುರಿತು ಮಾಹಿತಿ”
ಹೆಣ್ಣುಮಕ್ಕಳಿಗೆ ವಿಮೆ ಹಾಗೂ ಉಳಿತಾಯದ ಲಾಭ ಸಿಗಲಿ ಎಂಬ ದೃಷ್ಟಿಯಿಂದ ಎಲ್ಐಸಿಯು ಬಿಮಾ ಲಕ್ಷ್ಮೀ ಪಾಲಿಸಿಯನ್ನು ಜಾರಿಗೆ ತಂದಿದೆ. 18ರಿಂದ 50 ವರ್ಷದೊಳಗಿನ ಹೆಣ್ಣುಮಕ್ಕಳು ಪಾಲಿಸಿಯನ್ನು ಖರೀದಿಸಬಹುದಾಗಿದೆ. ಪಾಲಿಸಿಯ ಅವಧಿಯು 25 ವರ್ಷವಾಗಿದೆ. ಕನಿಷ್ಠ ವಿಮಾ ಮೊತ್ತ 2 ಲಕ್ಷ ರೂ. ಆಗಿದೆ. ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.
ಪಾಲಿಸಿಯಲ್ಲಿ 3 ಆಯ್ಕೆಗಳಿವೆ. ಪಾಲಿಸಿ ಪಾವತಿ ಅವಧಿ ಮುಗಿದ ನಂತರ ಮೊತ್ತದ ಶೇ 50ರಷ್ಟನ್ನು ಹಿಂತಿರುಗಿಸಲಾಗುತ್ತದೆ ಎಂಬುದು ಮೊದಲ ಆಯ್ಕೆಯಾಗಿದೆ. ವಿಮಾ ಮೊತ್ತದ ಶೇ 7.5ರಷ್ಟನ್ನು ಪ್ರತಿ 2 ವರ್ಷಗಳಿಗೊಮ್ಮೆ ಒಟ್ಟು 12 ಬಾರಿ ಪಾವತಿಸಲಾಗುತ್ತದೆ ಎಂಬುದು 2ನೇ ಆಯ್ಕೆಯಾಗಿದೆ. ಹಾಗೆಯೇ, ನಾಲ್ಕು ವರ್ಷಗಳಿಗೊಮ್ಮೆ ವಿಮಾ ಮೊತ್ತದ ಶೇ.15ರಷ್ಟು ಮೊತ್ತವನ್ನು 6 ಕಂತುಗಳಲ್ಲಿ ಹಿಂಪಡೆಯಬಹುದಾಗಿದೆ. ಇದು ಮೂರನೇ ಆಯ್ಕೆಯಾಗಿದೆ.