ಬೆಂಗಳೂರು: ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯೇ ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣಪತ್ರ ವಿತರಣೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಇದರಿಂದಾಗಿ ಗ್ರಾಮೀಣ ಜನರಿಗೆ ಸುಲಭವಾಗಿ ಇ-ಸ್ವತ್ತು (E-Swathu) ಸಿಗಲಿವೆ. ಹಾಗೆಯೇ, ಗ್ರಾಮ ಪಂಚಾಯಿತಿಗಳು ಕೂಡ ಆಧುನೀಕರಣಗೊಳ್ಳಲಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಈಗಾಗಲೇ ಯೋಜನೆಗೆ ಚಾಲನೆ ನೀಡಿದ್ದಾರೆ. ಗ್ರಾಮೀಣ ಜನರಿಗೆ ಅನುಕೂಲವಾಗಲಿ ಎಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ಕ್ಕೆ ತಿದ್ದುಪಡಿ ತರಲಾಗಿದೆ.
ಹೊಸ ನಿಯಮಗಳ ಜಾರಿಯಿಂದ 95,75,935 ಆಸ್ತಿಗಳಿಗೆ ಆಸ್ತಿ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ, ಹದಿನೈದು ದಿನಗಳೊಳಗಾಗಿ ತಂತ್ರಾಂಶದಲ್ಲಿ ತಾಂತ್ರಿಕ ಬದಲಾವಣೆಗಳನ್ನು ತಂದು ಗ್ರಾಮೀಣ ಜನರಿಗೆ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಗ್ರಾಮೀಣ ಜನರು ಇನ್ನುಮುಂದೆ ಸುಲಭವಾಗಿ ಭೂ ನೋಂದಣಿ ಪ್ರಮಾಣಪತ್ರ, ತೆರಿಗೆ ಪಾವತಿ ರಸೀದಿ, ಭೂ ಮಂಜೂರಾತಿ ಆದೇಶ, ಭೂಪರಿವರ್ತನೆ ಆದೇಶ ಸೇರಿ ಯಾವುದೇ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಹೊಸ ನಿಯಮಗಳಲ್ಲಿ ತೆರಿಗೆ ಲೆಕ್ಕಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಂಚಾಲಿತ ಅನುಮೋದನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಈ ಕ್ರಮವು ಗ್ರಾಮೀಣ ಜನರಿಗೆ ಆಸ್ತಿ ಸಂಬಂಧಿತ ದಾಖಲೆಗಳನ್ನು ಪಾರದರ್ಶಕವಾಗಿ, ವೈಜ್ಞಾನಿಕವಾಗಿ ಮತ್ತು ತ್ವರಿತವಾಗಿ ಪಡೆಯಲು ಅನುವು ಮಾಡಿಕೊಡಲಿದೆ.