ಬಳ್ಳಾರಿ: ರಾಜ್ಯಾದ್ಯಂತ ಅ.18 (ಶನಿವಾರ)ರವರೆಗೆ ಸಮೀಕ್ಷೆ ನಡೆಸಲು ಆದೇಶವಿತ್ತು. ಗಣತಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಬಳ್ಳಾರಿಯಲ್ಲಿ ಇನ್ನೆರಡು ದಿನ ಗಣತಿ ಮಾಡುವಂತೆ ಆದೇಶ ನೀಡಲಾಗಿದೆ. ಆದರೆ, ಹಬ್ಬದ ರಜಾ ದಿನದಲ್ಲಿಯೂ ಗಣತಿ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಿಕ್ಷಕರು, ತಾಲೂಕು ಪಂಚಾಯತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ದೀಪಾವಳಿ ರಜೆ ಇದೆ, ಯಾರ ಮನೆಗೆ ಹೋದರು ಹಬ್ಬದ ದಿನ ಯಾಕೆ ಬಂದಿದ್ದೀರಿ ಎಂದು ನಮಗೇ ಬೈಯುತ್ತಾರೆ. ಹೀಗಾಗಿ, ನಮ್ಮಿಂದ ಗಣತಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಶಿಕ್ಷಕರೂ ಸೇರಿದಂತೆ ಇತರೆ ಸಿಬ್ಬಂದಿಗಳು ಪ್ರತಿಭಟಿಸಿದ್ದಾರೆ. ಈ ವೇಳೆ, ಸಿಇಒ ಮೊಹಮ್ಮದ್ ಹ್ಯಾರಿಸ್ ಸುಮೈರ್ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಸಿಇಒ ಮತ್ತು ಶಿಕ್ಷಕರ ಮಧ್ಯೆ ಒಂದಷ್ಟು ವಾಗ್ವಾದ ನಡೆದಿದೆ.
ಇನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯನ್ನು ಹೊರತುಪಡಿಸಿ, ರಾಜ್ಯಾದ್ಯಂತ ಶನಿವಾರದ ವೇಳೆಗೆ ಶೇ.96.35ರಷ್ಟು ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಿದೆ. ಜಿಬಿಎ ವ್ಯಾಪ್ತಿಯಲ್ಲಿ ಕೇವಲ ಶೇ.39.76 ಮಾತ್ರ ಪ್ರಗತಿ ಕಂಡಿದ್ದು, ಇಂದು (ಭಾನುವಾರ) ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
“ಸಮೀಕ್ಷೆಯ ಪ್ರಗತಿ”
ಜಿಬಿಎ ಹೊರತುಪಡಿಸಿ ರಾಜ್ಯಾದ್ಯಂತ ಒಟ್ಟು 1,48,14,286 ಕುಟುಂಬಗಳ ಸಮೀಕ್ಷೆ ಗುರಿ ನೀಡಲಾಗಿತ್ತು. ಈ ಪೈಕಿ ಶನಿವಾರ 1,60,865 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಒಟ್ಟು 1,42,74,031 ಕುಟುಂಬಗಳ ಸಮೀಕ್ಷೆ ಮುಕ್ತಾಯವಾಗಿದೆ. ಶೇಕಡಾವಾರು ಪ್ರಗತಿ 96.35 ಆಗಿದೆ. ಆದರೆ ಜನಸಂಖ್ಯೆಯ ಪೈಕಿ 5,29,63,614 ಜನಸಂಖ್ಯೆಯ ಸಮೀಕ್ಷೆ ಮಾತ್ರ ನಡೆಸಿದ್ದು, ಒಟ್ಟು ಗುರಿಯ ಶೇ.87.32ರಷ್ಟು ಸಾಧನೆ ಆಗಿದೆ.