ಮಲೆನಾಡಿನ ಗ್ರಾಮೀಣ ಪರಿಸರದ ಕಥೆ ಹೊಂದಿರುವ ‘ವಲವಾರ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಸುತನ್ ಗೌಡ ಅವರ ನಿರ್ದೇಶನದಲ್ಲಿ ಬೆಳ್ಳಿತೆರೆ ಮೇಲೆ ಮಿಂಚಲು ಸಿದ್ದವಾಗಿದೆ. ಈ ಚಿತ್ರವು ಮಕ್ಕಳ ಸಿನಿಮಾಧಾರಿತವಾಗಿ ತೆರೆ ಮೇಲೆ ಬರಲಿದೆ.
‘ವಲವಾರ’ ಸಿನಿಮಾದ ಕಥೆಯನ್ನು ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೇಳಿ ಮೆಚ್ಚಿಕೊಂಡಿದ್ದರು. ‘ಪಿಆರ್‌ಕೆ ಪ್ರೊಡಕ್ಷನ್ಸ್’ ಮೂಲಕ ನಿರ್ಮಿಸಲು ಉದ್ದೇಶಿಸಿದ್ದರು. ಆದರೆ ಪುನೀತ್ ನಿಧನರಾದ ಕಾರಣ ಆ ಸಂಸ್ಥೆಯಿಂದ ‘ವಲವಾರ’ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಬೇಸರ ಇದೆ ಎಂದು ನಿರ್ದೇಶಕ ಸುತನ್ ಗೌಡ ಹೇಳಿದ್ದಾರೆ.
‘ವಲವಾರ’ ಸಿನಿಮಾದ ಟ್ರೇಲರ್ ಮತ್ತು ಹಾಡು ಗಮನ ಸೆಳೆದಿವೆ. ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಪಡೆದುಕೊಂಡಿದೆ. ನವೆಂಬರ್ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಇದು ಕನ್ನಡದ ಮಣ್ಣಿನ ಸೊಗಡು ಇರುವ ಕಥೆ. ಸಕಲೇಶಪುರದ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ. ‘ವಲವಾರ’ ಒಂದು ಮಕ್ಕಳ ಸಿನಿಮಾ. ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ಈ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ಬಾಲ್ಯ, ಜೀವನ ಮೌಲ್ಯಗಳನ್ನು ಪ್ರೇಕ್ಷಕರ ಮುಂದಿರಿಸುತ್ತದೆ. ಗ್ರಾಮೀಣ ಕರ್ನಾಟಕದ ಸೌಂದರ್ಯವನ್ನು ಸೆರೆಹಿಡಿಯುತ್ತದೆ ಎಂದು ಚಿತ್ರತಂಡ ಹೇಳಿದೆ.
‘ವಲವಾರ’ ಸಿನಿಮಾದ ಕಥೆಗೆ ತಕ್ಕಂತೆ ಸಕಲೇಶಪುರದ ಸುಂದರ ತಾಣಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಕದ್ರಿ ಮಣಿಕಾಂತ್ ಅವರು ಸಂಗೀತ ನೀಡಿದ್ದಾರೆ. ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಬಾಲರಾಜ್ ಗೌಡ ಅವರ ಛಾಯಾಗ್ರಹಣ, ಶ್ರೀಕಾಂತ್ ಎಸ್.ಹೆಚ್. ಅವರ ಸಂಕಲನ ಈ ಸಿನಿಮಾಗಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಸುಮನ್ ಹೆಚ್.ಎಸ್. ಕೆಲಸ ಮಾಡಿದ್ದಾರೆ. ಸಿಂಕ್ ಸೌಂಡ್ ವಿಭಾಗದಲ್ಲಿ ಆದರ್ಶ್ ಜೋಸೆಫ್, ಶಬ್ದವಿನ್ಯಾಸ ವಿಭಾಗದಲ್ಲಿ ವಿ.ಜಿ. ರಾಜನ್ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ಒಂದು ಹಸು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.
ಇಗಾಗಲೇ ಟ್ರೇಲರ್ ಮತ್ತು ಹಾಡು ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಪಾಸಿಟಿವ್ ಕಮೆಂಟ್ ಬಂದಿದೆ.