ಅಯೋಧ್ಯಾ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆ 2025ರ ದೀಪೋತ್ಸವದ ದೈವಿಕ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಇಂದು (ಭಾನುವಾರ) ಸಂಜೆ ಸರಯೂ ನದಿಯ ದಡದಲ್ಲಿ 28 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ಮತ್ತೊಂದು ವಿಶ್ವದಾಖಲೆ ನಿರ್ಮಿಸಲು ಉತ್ತರಪ್ರದೇಶದ ಸಜ್ಜಾಗಿದೆ. ಮೂರು ದಿನಗಳ ಈ ದೀಪೋತ್ಸವವು ಜನರ ಪಾಲ್ಗೊಳ್ಳುವಿಕೆ, ಭಕ್ತಿ ಮತ್ತು ಡಿಜಿಟಲ್ ತಂತ್ರಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಿದೆ.
ಈ ಬೃಹತ್ ಕಾರ್ಯಕ್ರಮಕ್ಕಾಗಿ ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ಸಮನ್ವಯದೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಸೇರಿದಂತೆ 33,000ಕ್ಕೂ ಹೆಚ್ಚು ಸ್ವಯಂಸೇವಕರು 56 ಘಾಟ್‌ಗಳಲ್ಲಿ ದೀಪಗಳನ್ನು ಜೋಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ದೀಪೋತ್ಸವದ ಪ್ರಮುಖಾಂಶಗಳು:
ರಾಮ್ ಕಿ ಪೈಡಿ: 16 ಲಕ್ಷ ದೀಪಗಳು
ವಿಸ್ತೃತ ಪೈಡಿ: 4.25 ಲಕ್ಷ ದೀಪಗಳು
ಚೌಧರಿ ಚರಣ್ ಸಿಂಗ್ ಘಾಟ್: 4.75 ಲಕ್ಷ ದೀಪಗಳು
ಭಜನ್ ಸಂಧ್ಯಾ ಘಾಟ್: 5.25 ಲಕ್ಷ ದೀಪಗಳು
ಲಕ್ಷ್ಮಣ ಕಿಲಾ ಘಾಟ್: 1.25 ಲಕ್ಷ ದೀಪಗಳು
ಈ ದೀಪಗಳನ್ನು ಬೆಳಗಿಸಲು 73,000 ಲೀಟರ್‌ಗೂ ಹೆಚ್ಚು ಎಣ್ಣೆ ಮತ್ತು 55 ಲಕ್ಷ ಹತ್ತಿಯ ಬತ್ತಿಗಳನ್ನು ಬಳಸಲಾಗುತ್ತಿದೆ. ವಿಶೇಷವೆಂದರೆ, 28 ಲಕ್ಷ ದೀಪಗಳ ಪೈಕಿ ಸುಮಾರು 16 ಲಕ್ಷ ದೀಪಗಳನ್ನು ಅಯೋಧ್ಯೆ ಮತ್ತು ಸುತ್ತಮುತ್ತಲಿನ ಗ್ರಾಮಗಳ 40 ಕುಂಬಾರರ ಕುಟುಂಬಗಳು ಕೈಯಿಂದಲೇ ತಯಾರಿಸಿವೆ. ಇದು ಸ್ಥಳೀಯ ಕುಶಲಕರ್ಮಿಗಳಿಗೆ ದೊಡ್ಡ ಮಟ್ಟದ ಉತ್ತೇಜನ ನೀಡಿದೆ.

ತಂತ್ರಜ್ಞಾನ ಮತ್ತು ಸಂಸ್ಕೃತಿಯ ಸಮ್ಮಿಲನ
ಈ ವರ್ಷದ ದೀಪೋತ್ಸವದಲ್ಲಿ ಆಧುನಿಕ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ರಾಮಾಯಣದ ಕಥೆಯನ್ನು ಪ್ರದರ್ಶಿಸುವ ‘ಡಿಜಿಟಲ್ ಭವ್ಯ ರಾಮಾಯಣ’ ಎಂಬ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು ಡ್ರೋನ್ ಲೈಟ್ ಶೋ ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ 1,100ಕ್ಕೂ ಹೆಚ್ಚು ‘ಮೇಕ್ ಇನ್ ಇಂಡಿಯಾ’ ಡ್ರೋನ್‌ಗಳು ಭಾಗವಹಿಸುತ್ತಿವೆ. ಇದರ ಜೊತೆಗೆ, ಹೊಲೊಗ್ರಾಫಿಕ್ ಲೇಸರ್ ಶೋ ಮತ್ತು ಸಂಗೀತ ಕಾರ್ಯಕ್ರಮಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತಿವೆ.
ದಿನವಿಡೀ ನಡೆಯುವ ವರ್ಣರಂಜಿತ ಶೋಭಾ ಯಾತ್ರೆಯಲ್ಲಿ ರಾಮಾಯಣದ ಪ್ರಸಂಗಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ. ನಂತರ ರಾಮ್ ಕಿ ಪೈಡಿಯಲ್ಲಿ ಶ್ರೀರಾಮನ ಸಾಂಕೇತಿಕ ‘ರಾಜ್ಯಾಭಿಷೇಕ’ ನೆರವೇರಲಿದೆ.
“ಅಯೋಧ್ಯೆಯ ದೀಪೋತ್ಸವವು ಕೇವಲ ಹಬ್ಬವಲ್ಲ, ಇದು ಭಾರತದ ಶಾಶ್ವತ ಸಂಸ್ಕೃತಿಯ ಜೀವಂತ ಅಭಿವ್ಯಕ್ತಿ. ಈ ವರ್ಷ ನಾವು ಭಕ್ತಿ, ಕಲೆ ಮತ್ತು ತಂತ್ರಜ್ಞಾನವನ್ನು ಸಂಯೋಜಿಸಿ ಪ್ರತಿಯೊಬ್ಬ ಸಂದರ್ಶಕರಿಗೂ ಸ್ಮರಣೀಯ ಅನುಭವವನ್ನು ನೀಡುತ್ತಿದ್ದೇವೆ” ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಹೇಳಿದ್ದಾರೆ. 2025ರ ಮೊದಲಾರ್ಧದಲ್ಲಿಯೇ 23.82 ಕೋಟಿಗೂ ಹೆಚ್ಚು ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಿದ್ದು, ಇದು ನಗರದ ಜಾಗತಿಕ ಆಧ್ಯಾತ್ಮಿಕ ಮಹತ್ವವನ್ನು ಸಾರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸರಯೂ ತಟದಲ್ಲಿ ಲಕ್ಷಾಂತರ ದೀಪಗಳು ಬೆಳಗುತ್ತಿದ್ದರೆ, “ಜೈ ಶ್ರೀ ರಾಮ್” ಘೋಷಣೆಗಳು ಮುಗಿಲು ಮುಟ್ಟುತ್ತಿವೆ. ಈ ದೃಶ್ಯ ಕೇವಲ ಕಣ್ಣಿಗೆ ಹಬ್ಬವಲ್ಲ, ಬದಲಿಗೆ ಲಕ್ಷಾಂತರ ಭಕ್ತರ ನಂಬಿಕೆ, ಸಾಮರಸ್ಯ ಮತ್ತು ಶ್ರೀರಾಮನ ಆದರ್ಶಗಳ ದ್ಯೋತಕವಾಗಿದೆ.