ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಸಂಬಂಧದ ಬಗೆಗಿನ ಊಹಾಪೋಹಗಳಿಗೆ ಈಗ ತೆರೆ ಬಿದ್ದಿದೆ. ಸ್ಮೃತಿ ಶೀಘ್ರದಲ್ಲೇ ‘ಇಂದೋರ್ ಸೊಸೆ’ಯಾಗಲಿದ್ದಾರೆ ಎಂದು ಪಲಾಶ್ ಮುಚ್ಚಲ್ ಅವರೇ ಖಚಿತಪಡಿಸಿದ್ದು, ಇಬ್ಬರ ಮದುವೆ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ.
ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಸಂಬಂಧದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಪಲಾಶ್, “ಅವರು ಶೀಘ್ರದಲ್ಲೇ ಇಂದೋರ್‌ನ ಸೊಸೆಯಾಗಲಿದ್ದಾರೆ… ನಾನು ಹೇಳಬಯಸುವುದು ಅಷ್ಟೇ” ಎಂದು ಮುಗುಳ್ನಗುತ್ತಲೇ ಉತ್ತರಿಸಿದ್ದಾರೆ. ಹಲವು ತಿಂಗಳುಗಳಿಂದ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಈ ಮೂಲಕ ಇಬ್ಬರಲ್ಲಿ ಒಬ್ಬರು ಮೊದಲ ಬಾರಿಗೆ ನೇರವಾಗಿ ಸ್ಪಷ್ಟನೆ ನೀಡಿದಂತಾಗಿದೆ. “ನಿಮಗೆ ಬೇಕಾದ ಹೆಡ್‌ಲೈನ್ ನಾನೇ ಕೊಟ್ಟಿದ್ದೇನೆ” ಎಂದು ಅವರು ಮಾಧ್ಯಮದವರಿಗೆ ಹೇಳಿ, ಸುದ್ದಿಯನ್ನು ಮತ್ತಷ್ಟು ದೃಢಪಡಿಸಿದರು.

ಸದ್ಯ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್‌ನ ಮಹತ್ವದ ಪಂದ್ಯಕ್ಕಾಗಿ ನಗರದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯವು ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ಭಾರತಕ್ಕೆ ನಿರ್ಣಾಯಕವಾಗಿದೆ. ಈ ಬಗ್ಗೆ ಮಾತನಾಡಿದ ಪಲಾಶ್, “ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಅವರಿಗೆ ನನ್ನ ಶುಭಾಶಯಗಳು. ಭಾರತ ತಂಡವು ಪ್ರತಿ ಪಂದ್ಯವನ್ನು ಗೆದ್ದು ದೇಶಕ್ಕೆ ಕೀರ್ತಿ ತರಲಿ ಎಂದು ನಾವು ಬಯಸುತ್ತೇವೆ,” ಎಂದರು.
ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ಈ ಹಿಂದೆ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಸಂಬಂಧದ ಬಗ್ಗೆ ಕುತೂಹಲ ಮೂಡಿಸಿದ್ದರು, ಆದರೆ ಈವರೆಗೂ ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಒಪ್ಪಿಕೊಂಡಿರಲಿಲ್ಲ. ಸಂಗೀತ ನಿರ್ದೇಶಕರಾಗಿ ತಮ್ಮ ಸಹೋದರಿ ಪಲಕ್ ಮುಚ್ಚಲ್ ಜೊತೆ ಹಲವು ಬಾಲಿವುಡ್ ಚಿತ್ರಗಳಿಗೆ ಸಂಗೀತ ನೀಡಿರುವ ಪಲಾಶ್, ಪ್ರಸ್ತುತ ‘ರಾಜು ಬಾಜೆವಾಲಾ’ ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.