ವಾಷಿಂಗ್ಟನ್: ಕೆರಿಬಿಯನ್ ಸಮುದ್ರದಲ್ಲಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಜಲಾಂತರ್ಗಾಮಿಯೊಂದರ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇಬ್ಬರು ಶಂಕಿತರನ್ನು ಹತ್ಯೆ ಮಾಡಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ. ಈ ಕಾರ್ಯಾಚರಣೆಯಿಂದ 25,000 ಅಮೆರಿಕನ್ನರ ಜೀವ ಉಳಿದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
“ಅಮೆರಿಕದ ಕಡೆಗೆ ಮಾದಕವಸ್ತು ಸಾಗಣೆಯ ಮಾರ್ಗದಲ್ಲಿ ಚಲಿಸುತ್ತಿದ್ದ ಬೃಹತ್ ಡ್ರಗ್ಸ್-ಸಾಗಣೆ ಜಲಾಂತರ್ಗಾಮಿಯನ್ನು ನಾಶಪಡಿಸಿದ್ದು ನನಗೆ ಸಂದ ದೊಡ್ಡ ಗೌರವ,” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಜಲಾಂತರ್ಗಾಮಿಯಲ್ಲಿ ಫೆಂಟನಿಲ್ ಮತ್ತು ಇತರ ಮಾದಕವಸ್ತುಗಳನ್ನು ತುಂಬಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ದಾಳಿಯಲ್ಲಿ ಇಬ್ಬರು “ಭಯೋತ್ಪಾದಕರು” ಹತರಾಗಿದ್ದು, ಬದುಕುಳಿದ ಇಬ್ಬರನ್ನು ಅವರ ಮೂಲ ದೇಶಗಳಾದ ಈಕ್ವೆಡಾರ್ ಮತ್ತು ಕೊಲಂಬಿಯಾಗಳಿಗೆ ವಿಚಾರಣೆಗಾಗಿ ವಾಪಸ್ ಕಳುಹಿಸಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು, ಕೊಲಂಬಿಯಾದ ಶಂಕಿತನನ್ನು ವಾಪಸ್ ಕಳುಹಿಸಿರುವುದನ್ನು ದೃಢಪಡಿಸಿದ್ದಾರೆ. “ಅವರು ಜೀವಂತವಾಗಿರುವುದು ನಮಗೆ ಸಂತೋಷ ತಂದಿದೆ ಮತ್ತು ಕಾನೂನಿನ ಪ್ರಕಾರ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಲ್ಯಾಟಿನ್ ಅಮೆರಿಕದಿಂದ ಅಮೆರಿಕಕ್ಕೆ ಮಾದಕವಸ್ತುಗಳ ಹರಿವನ್ನು ತಡೆಯುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಸೆಪ್ಟೆಂಬರ್‌ನಿಂದ ಈವರೆಗೆ ಕೆರಿಬಿಯನ್ ಸಮುದ್ರದಲ್ಲಿ ಕನಿಷ್ಠ ಆರು ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಒಟ್ಟು 27 ಜನರು ಸಾವನ್ನಪ್ಪಿದ್ದಾರೆ. ಆದರೆ, ಹತರಾದವರು ಮಾದಕವಸ್ತು ಸಾಗಣೆದಾರರು ಎಂಬುದಕ್ಕೆ ವಾಷಿಂಗ್ಟನ್ ಯಾವುದೇ ಪುರಾವೆಗಳನ್ನು ನೀಡಿಲ್ಲ. ತಜ್ಞರ ಪ್ರಕಾರ, ವಿಚಾರಣೆ ಇಲ್ಲದೆ ನಡೆಸುವ ಇಂತಹ ಹತ್ಯೆಗಳು ಕಾನೂನುಬಾಹಿರವಾಗಿವೆ.
ದಕ್ಷಿಣ ಅಮೆರಿಕದಿಂದ, ವಿಶೇಷವಾಗಿ ಕೊಲಂಬಿಯಾದಿಂದ, ಮಧ್ಯ ಅಮೆರಿಕ ಅಥವಾ ಮೆಕ್ಸಿಕೋಗೆ ಕೊಕೇನ್ ಸಾಗಿಸಲು ಕಾಡುಗಳಲ್ಲಿರುವ ರಹಸ್ಯ ಹಡಗುಕಟ್ಟೆಗಳಲ್ಲಿ ನಿರ್ಮಿಸಲಾದ ಅರೆ-ಜಲಾಂತರ್ಗಾಮಿಗಳನ್ನು (ಸೆಮಿ-ಸಬ್ಮರ್ಸಿಬಲ್‌ಗಳು) ವರ್ಷಗಳಿಂದ ಬಳಸಲಾಗುತ್ತಿದೆ.