ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ವಿರುದ್ಧ ಅಮೆರಿಕನ್ನರೇ ತಿರುಗಿಬಿದ್ದಿದ್ದಾರೆ. ಸರ್ಕಾರದ ಕಠಿಣ ನೀತಿಗಳು ಮತ್ತು ಸರ್ವಾಧಿಕಾರಿ ಧೋರಣೆಗಳನ್ನು ವಿರೋಧಿಸಿ ದೇಶಾದ್ಯಂತ ಲಕ್ಷಾಂತರ ಜನರು ‘ನಮಗೆ ರಾಜ ಬೇಡ’ (ನೋ ಕಿಂಗ್ಸ್) ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ, ಈ ಪ್ರತಿಭಟನೆಗಳಿಗೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿರುವ ಅಧ್ಯಕ್ಷ ಟ್ರಂಪ್, ತಾವು ಕಿರೀಟ ಧರಿಸಿರುವ ಕೃತಕ ಬುದ್ಧಿಮತ್ತೆ (ಎಐ) ರಚಿತ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟ್ರಂಪ್ ಸರ್ಕಾರದ ಮಾಧ್ಯಮ, ರಾಜಕೀಯ ವಿರೋಧಿಗಳು ಮತ್ತು ವಲಸಿಗರ ಮೇಲಿನ ದಾಳಿಯನ್ನು ಖಂಡಿಸಿ ಈ ಪ್ರತಿಭಟನೆಗಳು ನಡೆಯುತ್ತಿವೆ. ಈ ಬಗ್ಗೆ ಫಾಕ್ಸ್ ಬ್ಯುಸಿನೆಸ್‌ಗೆ ಪ್ರತಿಕ್ರಿಯಿಸಿದ್ದ ಟ್ರಂಪ್, “ಅವರು ನನ್ನನ್ನು ರಾಜ ಎಂದು ಕರೆಯುತ್ತಿದ್ದಾರೆ. ನಾನು ರಾಜನಲ್ಲ,” ಎಂದು ಹೇಳಿದ್ದರು. ಇದರ ಬೆನ್ನಲ್ಲೇ ತಮ್ಮ ಟ್ರುಥ್ ಸೋಶಿಯಲ್ ಖಾತೆಯಲ್ಲಿ ಎಐ-ರಚಿತ ವಿಡಿಯೋವೊಂದನ್ನು ಕೂಡ ಅವರು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ, ಟ್ರಂಪ್ ಕಿರೀಟ ಧರಿಸಿ ಯುದ್ಧ ವಿಮಾನವನ್ನು ಚಲಾಯಿಸುತ್ತಾ ಪ್ರತಿಭಟನಾಕಾರರ ಮೇಲೆ ಮಲವನ್ನು ಸುರಿಯುವಂತೆ ಚಿತ್ರಿಸಲಾಗಿದೆ.
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಹಂಚಿಕೊಂಡಿರುವ ಮತ್ತೊಂದು ಎಐ ವಿಡಿಯೋದಲ್ಲಿ, ಟ್ರಂಪ್ ಕಿರೀಟ ಮತ್ತು ನಿಲುವಂಗಿ ಧರಿಸುತ್ತಿದ್ದರೆ, ಡೆಮಾಕ್ರೆಟಿಕ್ ಪಕ್ಷದ ನಾಯಕಿ ನ್ಯಾನ್ಸಿ ಪೆಲೋಸಿ ಸೇರಿದಂತೆ ಇತರರು ಅವರ ಮುಂದೆ ಮಂಡಿಯೂರುವ ದೃಶ್ಯವಿದೆ. ಈ ಪ್ರತಿಭಟನೆಗಳು ನಡೆಯುತ್ತಿರುವಾಗ ಟ್ರಂಪ್ ಫ್ಲೋರಿಡಾದಲ್ಲಿರುವ ತಮ್ಮ ಮಾರ್-ಎ-ಲಾಗೊ ನಿವಾಸದಲ್ಲಿದ್ದರು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
“2500ಕ್ಕೂ ಹೆಚ್ಚು ಕಡೆ ಪ್ರತಿಭಟನೆ”
ಟ್ರಂಪ್ ಆಡಳಿತವು ಸರ್ವಾಧಿಕಾರದತ್ತ ಸಾಗುತ್ತಿದೆ ಎಂದು ಆರೋಪಿಸಿ ಅಮೆರಿಕದಾದ್ಯಂತ ಸುಮಾರು 2,500ಕ್ಕೂ ಹೆಚ್ಚು ಕಡೆಗಳಲ್ಲಿ ರ‍್ಯಾಲಿಗಳು ನಡೆದಿವೆ. ವಾಷಿಂಗ್ಟನ್, ಬೋಸ್ಟನ್, ಅಟ್ಲಾಂಟಾ, ಚಿಕಾಗೋ, ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. “ಪ್ರತಿಭಟಿಸುವುದಕ್ಕಿಂತ ದೊಡ್ಡ ದೇಶಭಕ್ತಿ ಮತ್ತೊಂದಿಲ್ಲ” ಮತ್ತು “ಫ್ಯಾಸಿಸಂ ಅನ್ನು ವಿರೋಧಿಸಿ” ಎಂಬ ಫಲಕಗಳನ್ನು ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದ ಓಷನ್ ಬೀಚ್‌ನಲ್ಲಿ ನೂರಾರು ಜನರು “ನಮಗೆ ರಾಜ ಬೇಡ!” (No King!) ಎಂದು ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. “ನಾನು ಹಿಂದೆಂದೂ ನೋಡಿರದ ಅಮೆರಿಕದಲ್ಲಿ ವಾಸಿಸುತ್ತಿರುವಂತೆ ಭಾಸವಾಗುತ್ತಿದೆ” ಎಂದು ಪ್ರತಿಭಟನಾಕಾರರೊಬ್ಬರು ನೋವು ತೋಡಿಕೊಂಡಿದ್ದಾರೆ. “ನಾನು 20 ವರ್ಷ ಸಿಐಎಯಲ್ಲಿ ಕೆಲಸ ಮಾಡಿದ್ದೇನೆ. ವಿದೇಶಗಳಲ್ಲಿ ಇಂತಹ ಉಗ್ರವಾದದ ವಿರುದ್ಧ ಹೋರಾಡಿದ್ದೇನೆ. ಆದರೆ ಈಗ ಅಮೆರಿಕದಲ್ಲಿಯೇ ಎಲ್ಲೆಡೆ ಉಗ್ರಗಾಮಿಗಳನ್ನು ನೋಡುತ್ತಿದ್ದೇನೆ. ಇವರು ನಮ್ಮನ್ನು ಅಂತರ್ಯುದ್ಧದತ್ತ ತಳ್ಳುತ್ತಿದ್ದಾರೆ” ಎಂದು ಮಾಜಿ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳಿದ ನಂತರ ಅವರ ಸರ್ಕಾರದ ವಿರುದ್ಧ ನಡೆಯುತ್ತಿರುವ ಮೂರನೇ ಬೃಹತ್ ಸರಣಿ ಪ್ರತಿಭಟನೆ ಇದಾಗಿದೆ. ಈ ಹಿಂದೆ ಜೂನ್ ತಿಂಗಳಲ್ಲಿ ದೇಶದ 2,100 ಸ್ಥಳಗಳಲ್ಲಿ ಪ್ರತಿಭಟನೆ ನಡೆದಿತ್ತು.