ಸಿರ್ಹಿಂದ್ : ಪಂಜಾಬ್‌ನ ಅಮೃತಸರದಿಂದ ಸಹರ್ಸಾಗೆ ತೆರಳುತ್ತಿದ್ದ ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ್ದು, ಮೂರು ಬೋಗಿಗಳು ಧಗಧಗನೆ ಹೊತ್ತಿ ಉರಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಒಂದು ಬೋಗಿಯಿಂದ ಹೊಗೆ ಬರುತ್ತಿರುವುದು ಕಂಡು ಬಂದ ತಕ್ಷಣ, ಅಂಬಾಲಾದಿಂದ ಕೇವಲ ಅರ್ಧ ಕಿಲೋ ಮೀಟರ್ ಮುಂದಿದ್ದ ರೈಲನ್ನು ಸಿರ್ಹಿಂದ್ ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಲಾಯಿತು. ಜೊತೆಗೆ ಆ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಇತರ ಬೋಗಿಗಳಿಗೆ ಸ್ಥಳಾಂತರಿಸಲಾಯಿತು. ಅದೃಷ್ಟವಶಾತ್ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.
ಅಧಿಕಾರಿಗಳ ಪ್ರಕಾರ, ಬೆಂಕಿ ಪತ್ತೆಯಾದ ತಕ್ಷಣ, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಲ್ಲಾ ಪ್ರಯಾಣಿಕರನ್ನು ಬೆಂಕಿ ಕಾಣಿಸಿಕೊಂಡಿದ್ದ ಬೋಗಿಯಿಂದ ಇತರ ಬೋಗಿಗಳಿಗೆ ಸ್ಥಳಾಂತರಿಸಲಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಹೊತ್ತಿಗೆ, ಬೆಂಕಿ ಮೂರು ಬೋಗಿಗಳಿಗೆ ಹರಡಿತ್ತು. ಹೆಚ್ಚಿನ ಹಾನಿಯನ್ನು ತಡೆಗಟ್ಟಿದ ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯ ಅಧಿಕಾರಿಗಳು ಬೆಂಕಿಯನ್ನು ತ್ವರಿತವಾಗಿ ನಂದಿಸಿದರು. ಅಪಘಾತದಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.