ನವದೆಹಲಿ: ಪಾಕಿಸ್ತಾನದ ವೈಮಾನಿಕ ದಾಳಿಗೆ 10 ನಾಗರಿಕರು ಬಲಿಯಾದ ಕಾರಣಕ್ಕೆ ಪಾಕಿಸ್ತಾನದೊಂದಿಗಿನ ತ್ರಿಕೋನ ಕ್ರಿಕೆಟ್ ಸರಣಿಯನ್ನು ಅಫ್ಘಾನಿಸ್ತಾನ ರದ್ದುಗೊಳಿಸಿದ ಬೆನ್ನಲ್ಲೇ ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಬಿಸಿಸಿಐ ಮತ್ತು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. “ಕ್ರೀಡೆಗಿಂತ ದೇಶವೇ ಮೊದಲು ಎಂಬುದನ್ನು ಅಫ್ಘಾನಿಸ್ತಾನದಿಂದ ಕಲಿಯಿರಿ” ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಅಫ್ಘಾನ್ ಕ್ರಿಕೆಟಿಗರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನವು ಪಾಕಿಸ್ತಾನ ಹಾಗೂ ಶ್ರೀಲಂಕಾ ಒಳಗೊಂಡ ತ್ರಿಕೋನ ಟಿ20 ಸರಣಿಯಿಂದ ಹಿಂದೆ ಸರಿದಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ, ಏಪ್ರಿಲ್ 22ರ ಪಹಲ್ಗಾಮ್ ಉಗ್ರರ ದಾಳಿಯ ನಂತರವೂ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಆಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪಂದ್ಯವನ್ನು ಬಹಿಷ್ಕರಿಸುವಂತೆ ಕೂಗು ಎದ್ದಿದ್ದರೂ, ಬಿಸಿಸಿಐ ಮತ್ತು ಸರ್ಕಾರ ಪಂದ್ಯವನ್ನು ಮುಂದುವರಿಸಿದ್ದವು. ಇದನ್ನು ಉಲ್ಲೇಖಿಸಿ ಪ್ರಿಯಾಂಕಾ ಚತುರ್ವೇದಿ, “ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದೊಂದಿಗಿನ ಸರಣಿ ಪಂದ್ಯಗಳನ್ನು ರದ್ದುಗೊಳಿಸಿರುವುದು ಸಂತಸ ತಂದಿದೆ. ಕ್ರೀಡೆಗಿಂತ ದೇಶಕ್ಕೆ ಹೇಗೆ ಆದ್ಯತೆ ನೀಡಬೇಕೆಂದು ಬಿಸಿಸಿಐ ಮತ್ತು ಭಾರತ ಸರ್ಕಾರ ಅವರಿಂದ ಪಾಠ ಕಲಿಯಬಹುದು,” ಎಂದು ‘ಎಕ್ಸ್’ (ಟ್ವೀಟರ್)ನಲ್ಲಿ ಬರೆದುಕೊಂಡಿದ್ದಾರೆ.
“ಪಾಕಿಸ್ತಾನದ ಆಡಳಿತವು ಅಮಾಯಕ ಬಲಿಪಶುಗಳ ರಕ್ತದ ಮೇಲೆ ಬೆಳೆಯುವ ಹೇಡಿಗಳ ಗುಂಪು,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಶ್ರೀಲಂಕಾಕ್ಕೂ ಮನವಿ”
2009ರಲ್ಲಿ ಲಾಹೋರ್‌ನ ಗಡಾಫಿ ಕ್ರೀಡಾಂಗಣದ ಬಳಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ನಡೆದ ಉಗ್ರರ ದಾಳಿಯನ್ನು ಸ್ಮರಿಸಿದ ಚತುರ್ವೇದಿ, “ಅಫ್ಘಾನಿಸ್ತಾನ ತಂಡದೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿ ಶ್ರೀಲಂಕಾ ಕೂಡ ಈ ತ್ರಿಕೋನ ಸರಣಿಯಿಂದ ಹಿಂದೆ ಸರಿಯುತ್ತದೆ ಎಂದು ಭಾವಿಸುತ್ತೇನೆ. ಬಿಸಿಸಿಐನಂತೆ ಅಲ್ಲದೆ, ಇತರ ಏಷ್ಯಾದ ತಂಡಗಳು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ನಿಲ್ಲಬೇಕು” ಎಂದು ಆಗ್ರಹಿಸಿದ್ದಾರೆ.
ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡುವ ನಿರ್ಧಾರ ಕೈಗೊಂಡಿದ್ದಕ್ಕಾಗಿ ಮೋದಿ ಸರ್ಕಾರ ಮತ್ತು ಬಿಸಿಸಿಐ, ವಾಣಿಜ್ಯ ಲಾಭಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಂಡಿವೆ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.