ಬೆಂಗಳೂರು : ಹಣಕ್ಕೆ ಮೂರು ಪಟ್ಟು ನಕಲಿ ನೋಟುಗಳನ್ನು ನೀಡುವುದಾಗಿ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ತಿರುನೆಲ್ವೇಲಿ ಮೂಲದ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದ ಈ ಗ್ಯಾಂಗ್ ಬೆಂಗಳೂರಿನಲ್ಲೂ ತನ್ನ ಕೃತ್ಯಗಳನ್ನು ಮುಂದುವರೆಸುವ ಬಗ್ಗೆ ಮಾಹಿತಿ ಸಿಕ್ಕಿತು. ಖಚಿತ ಮಾಹಿತಿ ಮೇರೆಗೆ ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ವಂಚನೆಗೆ ಯತ್ನಿಸುತ್ತಿದ್ದಾಗಲೇ ಪೊಲೀಸರು ಮೂವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆರೋಪಿಗಳು 10 ಲಕ್ಷ ರೂಪಾಯಿಗಳ ಅಸಲಿ ನೋಟುಗಳನ್ನು ಕೊಟ್ಟರೆ, ಅದಕ್ಕೆ ಪ್ರತಿಯಾಗಿ 30 ಲಕ್ಷ ರೂಪಾಯಿಗಳ ‘ಕೋಟಾ ನೋಟು’ ನೀಡುವುದಾಗಿ ಜನರಿಗೆ ಆಫರ್ ನೀಡುತ್ತಿದ್ದರು.
ದಾಳಿ ವೇಳೆ ಪರಿಶೀಲಿಸಿದಾಗ, ಆರೋಪಿಗಳು ಹಣದ ಬಂಡಲ್ ಇರುವ ಸೂಟ್‌ಕೇಸ್ ಅನ್ನು ಇಟ್ಟುಕೊಂಡಿದ್ದರು. ಈ ನೋಟುಗಳ ಬಂಡಲ್‌ನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಮಾತ್ರ ಅಸಲಿ ನೋಟುಗಳನ್ನು ಇರಿಸಲಾಗುತ್ತಿತ್ತು. ಮಧ್ಯಭಾಗದಲ್ಲಿ ಕೇವಲ ಬಿಳಿ ಹಾಳೆಗಳನ್ನು ಜೋಡಿಸಿ, ಸಂಪೂರ್ಣ ಹಣವೇ ಅಸಲಿಯಾಗಿದೆ ಎಂದು ನಂಬಿಸಿ ವಂಚನೆ ಮಾಡುವುದು ಇವರ ತಂತ್ರವಾಗಿತ್ತು.
ಈ ಗ್ಯಾಂಗ್ ಅಕ್ರಮವಾಗಿ ಲಕ್ಷಾಂತರ ಹಣಕ್ಕೆ ಮೂರು ಪಟ್ಟು ಹಣ ನೀಡುವುದಾಗಿ ಮೋಸ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಜಯನಗರ ಪೊಲೀಸರು ಖಚಿತ ಆಧಾರದೊಂದಿಗೆ ದಾಳಿ ನಡೆಸಿದರು. ಸದ್ಯ ಮೂವರನ್ನ ಬಂಧಿಸಿ ಇನ್ನುಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.