ಬೆಂಗಳೂರು: ರಾಜ್ಯ ಸರ್ಕಾರವು ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಅದರಂತೆ, ಫಲಾನುಭವಿಗಳ ಖಾತೆಗೆ ಹಣವನ್ನೂ ಜಮೆ ಮಾಡುತ್ತಿದೆ. ಇದರ ಬೆನ್ನಲ್ಲೇ, ಯೋಜನೆ ಅನ್ವಯ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹಾಗಾಗಿ, ಹೆಣ್ಣುಮಕ್ಕಳು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ನೋಡಿಕೊಳ್ಳಬಹುದಾಗಿದೆ.
ಕುಟುಂಬದ ಯಜಮಾನಿಯರು ಆನ್ ಲೈನ್ ಮೂಲಕವೇ ಸುಲಭವಾಗಿ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಅಧಿಕೃತ ವೆಬ್ ಸೈಟ್ ಆಗಿರುವ https://sevasindhugs.karnataka.gov.in ಗೆ ಭೇಟಿ ನೀಡಬೇಕು. ನಿಮ್ಮ ಜಿಲ್ಲೆ, ತಾಲೂಕು, ಪಂಚಾಯಿತಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬಹುದು.
ಕೆಲ ದಿನಗಳಿಂದ ಗೃಹ ಲಕ್ಷ್ಮೀ ಯೋಜನೆಯ ಹಣವು ಹೆಣ್ಣುಮಕ್ಕಳ ಖಾತೆಗೆ ಸರಿಯಾಗಿ ಜಮೆಯಾಗುತ್ತಿಲ್ಲ. ಗೃಹ ಲಕ್ಷ್ಮೀ ಯೋಜನೆಯ ಹಣವು ಆರಂಭದಲ್ಲಿ ಪ್ರತಿ ತಿಂಗಳು ನಿಯಮಿತವಾಗಿ ಜಮೆಯಾಗುತ್ತಿತ್ತು. ಆದರೆ, ಕಳೆದ ಕೆಲವು ತಿಂಗಳಿಂದ ಎರಡು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಜಮೆಯಾಗುತ್ತಿದೆ. ಕೆಲವು ಫಲಾನುಭವಿಗಳಿಗೆ ಈಗ ನಾಲ್ಕು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ಹಣ ಜಮೆಯಾಗಿಲ್ಲ. ಹಾಗಾಗಿ, ರಾಜ್ಯದ ಹೆಣ್ಣುಮಕ್ಕಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ, ಜುಲೈನಿಂದ ಗೃಹಲಕ್ಷ್ಮೀ ಯೋಜನೆ ಅನ್ವಯ ಹೆಣ್ಣುಮಕ್ಕಳಿಗೆ ಹಣ ಜಮೆಯಾಗಿಲ್ಲ. ಶೀಘ್ರದಲ್ಲೇ ಜುಲೈ ತಿಂಗಳ ಹಣ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಯೋಜನೆ ಜಾರಿಯಾದಾಗಿನಿಂದ ಇದುವರೆಗೆ, ಅಂದರೆ ಕಳೆದ 22 ತಿಂಗಳಲ್ಲಿ ಹೆಣ್ಣುಮಕ್ಕಳ ಖಾತೆಗೆ ಸುಮಾರು 52,514 ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರವು ಜಮೆ ಮಾಡಿದೆ.