ಉಡುಪಿ: ‘ಇಂದಿನ ಕಲುಷಿತ ವಾತಾವರಣದಲ್ಲಿ ಜೀವನವನ್ನು ಸುಂದರವಾಗಿಸಬಲ್ಲ ಪ್ರೀತಿಗೆ ಬದಲಾಗಿ ಮನುಷ್ಯ-ಮನುಷ್ಯರ ನಡುವೆ ದ್ವೇಷದ ಬೆಂಕಿ ಹಬ್ಬುತ್ತಿದೆʼ ಎಂದು ಕೋಟ-ಪಡುಕೆರೆಯ ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ್ ಹೇಳಿದ್ದಾರೆ.
ಕಾಲೆಜಿನ ಕನ್ನಡ ಸಂಘ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕುಂದಾಪುರದ ಜೆಸ್ಸಿ ಎಲಿಝಬೆತ್ ಜೋಸೆಫ್ ಮಲೆಯಾಳದಿಂದ ಅನುವಾದಿಸಿದ ‘ಹೆಂಡತಿ’ ಕಾದಂಬರಿಯ ಬಿಡುಗಡೆ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ.ರಾಜೇಂದ್ರ ನಾಯಕ್, ಜಾತಿ-ಧರ್ಮಗಳ ಹೆಸರಿನಲ್ಲಿ ಕಲಹಗಳು ಮತ್ತು ಹಿಂಸೆ-ರಕ್ತಪಾತಗಳು ಹೆಚ್ಚುತ್ತಿವೆ. ಈ ಸಮಸ್ಯೆಗೆ ಪರಿಹಾರ ನೀಡಲು ಸಾಹಿತ್ಯದಿಂದ ಮಾತ್ರ ಸಾಧ್ಯ. ಇಂದಿನ ಯುವಜನರು ಹೆಚ್ಚು ಹೆಚ್ಚು ಸಾಹಿತ್ಯಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಾವಿಯೊಳಗಿನ ಕಪ್ಪೆಗಳ ಹಾಗಿರದೆ ವಿಶಾಲವಾದ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದ ಅನುವಾದವಾದ ಸಾಹಿತ್ಯವನ್ನೂ ಓದಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ’ ಎಂದು ತಿಳಿಸಿದ್ದಾರೆ.
ಕೊಟೇಶ್ವರದ ಆಚಾರ್ಯ ನರ್ಸಿಂಗ್ ಹೋಂನ ವೈದ್ಯಾಧಿಕಾರಿ, ಖ್ಯಾತ ಸಾಹಿತಿ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾದ ಡಾ. ಭಾಸ್ಕರ ಆಚಾರ್ಯರು ಪುಸ್ತಕ ಲೋಕಾರ್ಪಣೆ ಮಾಡಿ ಪ್ರಪಂಚವನ್ನು ಒಂದಾಗಿಸುವಲ್ಲಿ ಅನುವಾದ ಮತ್ತು ಅನುವಾದಕರ ಮಹತ್ವದ ಕುರಿತು ತಿಳಿಸಿದರು. ಪುಸ್ತಕದ ಲೇಖಕಿ ಜೆಸ್ಸಿ ಎಲಿಝಬೆತ್ ಜೋಸೆಫ್ ಪ್ರಾಸ್ತಾವಿಕವಾಗಿ ತಾನು ಅನುವಾದದಲ್ಲಿ ತೊಡಗಿಕೊಂಡ ಬಗೆಯನ್ನು ವಿವರಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ ಆಚಾರ್ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದರು. ಲೇಖಕಿ ಪಾರ್ವತಿ ಜಿ.ಐತಾಳ್ ಶುಭಾ ಶುಭ ಸಂಶನೆ ಗೈದರು. ಐಕ್ಯೂಎಸಿ ಮುಖ್ಯಸ್ಥ ಪ್ರೊ.ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಗ್ಲಿಷ್ ಉಪನ್ಯಾಸಕಿ ಸುಷ್ಮಾ ಧನ್ಯವಾದ ಸಮರ್ಪಣೆ ಮಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಡಾ.ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.