ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಕಂಡರೆ ಪ್ರಧಾನಿ ನರೇಂದ್ರ ಮೋದಿಯವರಿಗೆ “ಭಯ” ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು “ಆಧಾರರಹಿತ” ಎಂದು ಕರೆದಿರುವ ಅವರು, “ನೀವು ನಿಮ್ಮ ‘ಭಾರತ ದ್ವೇಷ’ದ ಪ್ರವಾಸಕ್ಕೆ ವಾಪಸ್ ಹೋಗುವುದು ಉತ್ತಮ” ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ ಆರೋಪವೇನು?
ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಪ್ರಧಾನಿ ಮೋದಿಯವರು ನನಗೆ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಗುರುವಾರ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, “ಈ ರೀತಿಯ ಹೇಳಿಕೆಗಳನ್ನು ನೀಡಲು ಟ್ರಂಪ್‌ಗೆ ಪ್ರಧಾನಿ ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ, ‘ಆಪರೇಷನ್ ಸಿಂದೂರ’ ವಿಚಾರದಲ್ಲಿ ಟ್ರಂಪ್ ಹೇಳಿಕೆಯನ್ನು ಅವರು ಈವರೆಗೂ ಖಂಡಿಸಿಲ್ಲ, ಹಲವು ಬಾರಿ ಕಡೆಗಣಿಸಿದರೂ ಮೋದಿ ಮಾತ್ರ ಅವರಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾರೆ. ಇವೆಲ್ಲವೂ ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ಹೆದರುತ್ತಾರೆ ಎಂಬುದನ್ನು ತೋರಿಸುತ್ತದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಮೇರಿ ಮಿಲ್ಬೆನ್ ತಿರುಗೇಟು
ರಾಹುಲ್ ಗಾಂಧಿ ಅವರ ಆರೋಪಗಳಿಗೆ ‘ಎಕ್ಸ್’ (ಟ್ವಿಟರ್) ನಲ್ಲಿ ಉತ್ತರಿಸಿರುವ ಮೇರಿ ಮಿಲ್ಬೆನ್, “ರಾಹುಲ್ ಗಾಂಧಿಯವರೇ, ನಿಮ್ಮ ಊಹೆ ತಪ್ಪು. ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುವುದಿಲ್ಲ. ಮೋದಿ ಅವರು ದೀರ್ಘಕಾಲೀನ ತಂತ್ರವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಅಮೆರಿಕದೊಂದಿಗಿನ ಅವರ ರಾಜತಾಂತ್ರಿಕತೆ ಕಾರ್ಯತಂತ್ರದ ಭಾಗವಾಗಿದೆ” ಎಂದು ಹೇಳಿದ್ದಾರೆ.
“ಟ್ರಂಪ್ ಯಾವಾಗಲೂ ಅಮೆರಿಕದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವಂತೆ, ಮೋದಿಯವರು ಭಾರತಕ್ಕೆ ಯಾವುದು ಉತ್ತಮವೋ ಅದನ್ನು ಮಾಡುತ್ತಾರೆ. ಅದನ್ನು ನಾನು ಶ್ಲಾಘಿಸುತ್ತೇನೆ. ದೇಶದ ಮುಖ್ಯಸ್ಥರಾದವರು ಹಾಗೆಯೇ ಮಾಡುವುದು. ಈ ರೀತಿಯ ನಾಯಕತ್ವ ನಿಮಗೆ ಅರ್ಥವಾಗುತ್ತದೆ ಎಂದು ನಾನು ನಿರೀಕ್ಷಿಸುವುದಿಲ್ಲ, ಏಕೆಂದರೆ ಭಾರತದ ಪ್ರಧಾನಿಯಾಗುವ ಚಾಣಾಕ್ಷತೆ ನಿಮಗಿಲ್ಲ. ನೀವು ನಿಮ್ಮ ‘ಭಾರತ ದ್ವೇಷದ ಪ್ರವಾಸಕ್ಕೆ’ ಹಿಂತಿರುಗುವುದು ಉತ್ತಮ” ಎಂದು ಮಿಲ್ಬೆನ್ ಕಟುವಾಗಿ ಟೀಕಿಸಿದ್ದಾರೆ.