ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಇಂದು (ಶುಕ್ರವಾರ) ಕೊನೆಯ ದಿನವಾಗಿದ್ದು, ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಗೊಂದಲ ಇನ್ನೂ ಬಗೆಹರಿದಿಲ್ಲ. ಮುಕೇಶ್ ಸಹಾನಿ ನೇತೃತ್ವದ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ), ತಮಗೆ 15 ನಿರ್ದಿಷ್ಟ ಕ್ಷೇತ್ರಗಳನ್ನು ನೀಡಬೇಕು ಹಾಗೂ ಸಹಾನಿ ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿರುವುದು ಮೈತ್ರಿಕೂಟಕ್ಕೆ ಹೊಸ ತಲೆನೋವು ಉಂಟುಮಾಡಿದೆ.
ಆರ್‌ಜೆಡಿ ಮತ್ತು ಕಾಂಗ್ರೆಸ್‌ನಂತಹ ಪ್ರಮುಖ ಪಕ್ಷಗಳ ನಡುವೆಯೇ ಸೀಟು ಹಂಚಿಕೆ ಅಂತಿಮಗೊಳ್ಳದ ಹೊತ್ತಿನಲ್ಲಿ, ವಿಐಪಿ ಪಕ್ಷದ ಈ ಬೇಡಿಕೆಗಳು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿವೆ. ಮೂಲಗಳ ಪ್ರಕಾರ, ಸಹಾನಿ ಆರಂಭದಲ್ಲಿ 60 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರು, ನಂತರ ಅದನ್ನು 40, ಬಳಿಕ 20ಕ್ಕೆ ಇಳಿಸಿ, ಇದೀಗ ಕನಿಷ್ಠ 15 ಸ್ಥಾನಗಳಿಗೆ ಪಟ್ಟು ಹಿಡಿದಿದ್ದಾರೆ. ಆದರೆ, ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ, ಸಹಾನಿ ಪಕ್ಷಕ್ಕೆ 12ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಲು ಸಿದ್ಧವಿಲ್ಲ ಎನ್ನಲಾಗಿದೆ.
“ದಿನವಿಡೀ ನಡೆದ ನಾಟಕೀಯ ಬೆಳವಣಿಗೆ”
ಗುರುವಾರ ದಿನವಿಡೀ ನಡೆದ ನಾಟಕೀಯ ಬೆಳವಣಿಗೆಯಲ್ಲಿ, ಸಹಾನಿ ಮೈತ್ರಿಕೂಟದಿಂದ ಹೊರನಡೆಯಲಿದ್ದಾರೆ ಎಂಬ ವರದಿಗಳು ಹರಡಿದ್ದವು. ತೇಜಸ್ವಿ ಯಾದವ್ ಅವರಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಹತಾಶೆಗೊಂಡಿದ್ದ ಸಹಾನಿ, ಬೆಂಬಲಕ್ಕಾಗಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೊರೆ ಹೋಗಿದ್ದರು. ಒತ್ತಡ ತಂತ್ರದ ಭಾಗವಾಗಿ, ಗುರುವಾರ ತಮ್ಮ ಪತ್ರಿಕಾಗೋಷ್ಠಿಯನ್ನು ಮೂರು ಬಾರಿ ಬದಲಾಯಿಸಿ, ಅಂತಿಮವಾಗಿ ರದ್ದುಗೊಳಿಸಿದ್ದರು.
ಆದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಮುಕೇಶ್ ಸಹಾನಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ಬಿಕ್ಕಟ್ಟು ತಾತ್ಕಾಲಿಕವಾಗಿ ಶಮನಗೊಂಡಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಸಹಾನಿ, ತಮಗೆ ಸೀಟುಗಳಿಗಿಂತ ಮೈತ್ರಿಕೂಟದ ಸಿದ್ಧಾಂತವೇ ಮುಖ್ಯ ಎಂದು ಹೇಳಿದ್ದಾರೆ. ಆದರೆ, ತಮಗೆ ನೀಡಿದ ಸೀಟುಗಳ ಭರವಸೆಯನ್ನು ಈಡೇರಿಸಿಲ್ಲ ಎಂಬುದನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಮಲ್ಲಾಹ್ ಪುತ್ರ’ ಎಂದೇ ಖ್ಯಾತರಾಗಿರುವ ಸಹಾನಿ, ರಾಜ್ಯದ ಸುಮಾರು ಶೇ.2.5ರಷ್ಟಿರುವ ನಿಶಾದ್ (ಬೆಸ್ತರು ಮತ್ತು ದೋಣಿ ನಡೆಸುವವರು) ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ರಾಹುಲ್ ಗಾಂಧಿ ಅವರ ಮಧ್ಯಪ್ರವೇಶದಿಂದ ಸದ್ಯಕ್ಕೆ ಬಿಕ್ಕಟ್ಟು ತಣ್ಣಗಾಗಿದ್ದರೂ, ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆಯ ಅಂತಿಮ ಸೂತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.