ನವದೆಹಲಿ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ರೋವರ್ ವಲಯದ ಡಿಐಜಿ ಆಗಿರುವ ಹಿರಿಯ ಐಪಿಎಸ್ ಅಧಿಕಾರಿ ಹರ್ಚರಣ್ ಸಿಂಗ್ ಭುಲ್ಲರ್ ಅವರನ್ನು ಸಿಬಿಐ ಇಂದು(ಶುಕ್ರವಾರ) ಬಂಧಿಸಿದೆ. ಕೇವಲ 8 ಲಕ್ಷ ರೂಪಾಯಿ ಲಂಚದ ಬೇಡಿಕೆಯಿಂದ ಆರಂಭವಾದ ಈ ಪ್ರಕರಣ ಇದೀಗ ಅಧಿಕಾರಿಯ ಮನೆಯಿಂದ ಬರೋಬ್ಬರಿ 5 ಕೋಟಿ ರೂಪಾಯಿ ನಗದು, ಐಷಾರಾಮಿ ಕಾರುಗಳು, ಚಿನ್ನಾಭರಣ ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗುವಲ್ಲಿಗೆ ಬಂದು ನಿಂತಿದೆ.
2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಹರ್ಚರಣ್ ಸಿಂಗ್ ಭುಲ್ಲರ್ ಮತ್ತು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಎಂಬ ಖಾಸಗಿ ವ್ಯಕ್ತಿಯನ್ನು ಸಿಬಿಐ ಬಂಧಿಸಿದೆ. ಸ್ಥಳೀಯ ಉದ್ಯಮಿಯೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು “ಇತ್ಯರ್ಥಗೊಳಿಸಲು” ಭುಲ್ಲರ್ ಈ ಮಧ್ಯವರ್ತಿ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ತಿಳಿಸಿದೆ.

ಫತೇಘರ್ ಸಾಹಿಬ್‌ನ ಗುಜರಿ ವ್ಯಾಪಾರಿ ಆಕಾಶ್ ಬಟ್ಟಾ ಎಂಬವರು ನೀಡಿದ ದೂರಿನ ಮೇರೆಗೆ ಸಿಬಿಐ ಗುರುವಾರ ಪ್ರಕರಣ ದಾಖಲಿಸಿತ್ತು. ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಡಿಐಜಿ ಭುಲ್ಲರ್, ಆರಂಭಿಕವಾಗಿ 8 ಲಕ್ಷ ರೂ. ಹಾಗೂ ನಂತರ ಪ್ರತಿ ತಿಂಗಳು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
ದೂರು ಸ್ವೀಕರಿಸಿದ ಸಿಬಿಐ, ಚಂಡೀಗಢದ ಸೆಕ್ಟರ್ 21ರಲ್ಲಿ ಬಲೆ ಬೀಸಿತ್ತು. ಕಾರ್ಯಾಚರಣೆ ವೇಳೆ, ದೂರುದಾರರಿಂದ 8 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಮಧ್ಯವರ್ತಿ ಕೃಷ್ಣನನ್ನು ಸಿಬಿಐ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹಣ ತಲುಪಿರುವುದನ್ನು ಡಿಐಜಿ ಭುಲ್ಲರ್ ಒಪ್ಪಿಕೊಂಡ ನಂತರ, ಮೊಹಾಲಿಯಲ್ಲಿದ್ದ ಅವರನ್ನು ಸಿಬಿಐ ತಂಡ ಬಂಧಿಸಿದೆ.

“ಶೋಧದ ವೇಳೆ ಪತ್ತೆಯಾದ ವಸ್ತುಗಳು”
ಬಂಧನದ ನಂತರ ಭುಲ್ಲರ್‌ಗೆ ಸೇರಿದ ರೋವರ್, ಮೊಹಾಲಿ ಮತ್ತು ಚಂಡೀಗಢದಲ್ಲಿರುವ ಹಲವು ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ಈ ವೇಳೆ, ಸುಮಾರು 5 ಕೋಟಿ ರೂಪಾಯಿ ನಗದು (ಎಣಿಕೆ ಮುಂದುವರಿದಿದೆ), 1.5 ಕೆಜಿ ಚಿನ್ನ ಹಾಗೂ ಆಭರಣಗಳು, ಪಂಜಾಬ್‌ನಾದ್ಯಂತ ಇರುವ ಸ್ಥಿರಾಸ್ತಿಗಳ ದಾಖಲೆಗಳು, ಮರ್ಸಿಡಿಸ್ ಮತ್ತು ಆಡಿ ಐಷಾರಾಮಿ ಕಾರುಗಳ ಕೀಗಳು, 22 ದುಬಾರಿ ಕೈಗಡಿಯಾರಗಳು, ಲಾಕರ್ ಕೀಗಳು ಮತ್ತು 40 ಲೀಟರ್ ವಿದೇಶಿ ಮದ್ಯ, ಡಬಲ್ ಬ್ಯಾರೆಲ್ ಶಾಟ್‌ಗನ್, ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಮಧ್ಯವರ್ತಿ ಕೃಷ್ಣನ ನಿವಾಸದಿಂದ ಹೆಚ್ಚುವರಿಯಾಗಿ 21 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಯಾರಿವರು ಐಪಿಎಸ್ ಅಧಿಕಾರಿ?
2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಭುಲ್ಲರ್, ಈ ಹಿಂದೆ ಪಟಿಯಾಲ ವಲಯದ ಡಿಐಜಿ, ವಿಚಕ್ಷಣಾ ದಳದ ಜಂಟಿ ನಿರ್ದೇಶಕ ಹಾಗೂ ಹಲವು ಜಿಲ್ಲೆಗಳ ಎಸ್‌ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು. ಶಿರೋಮಣಿ ಅಕಾಲಿದಳ (ಎಸ್‌ಎಡಿ) ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧದ ಹೈ-ಪ್ರೊಫೈಲ್ ಡ್ರಗ್ಸ್ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿಯ ನೇತೃತ್ವವನ್ನು ಇವರೇ ವಹಿಸಿದ್ದರು. ಅಷ್ಟೇ ಅಲ್ಲದೆ, ಪಂಜಾಬ್ ಸರ್ಕಾರದ ಮಾದಕವಸ್ತು ನಿಗ್ರಹ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭುಲ್ಲರ್ ಅವರು ಪಂಜಾಬ್‌ನ ಮಾಜಿ ಡಿಜಿಪಿ ಎಂ.ಎಸ್. ಭುಲ್ಲರ್ ಅವರ ಪುತ್ರ ಎಂಬುದು ಗಮನಾರ್ಹ.
ಇಬ್ಬರೂ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.